ಕೋಯಿಕ್ಕೋಡ್, ಕೇರಳ:ಕೃತಕ ಬುದ್ಧಿಮತ್ತೆ ಬಳಸಿ ನಕಲಿ ವಿಡಿಯೋ ಕಾಲ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ಘಟನೆಯ ಬಗ್ಗೆ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂತಹ ವಂಚನೆ ದೇಶದಲ್ಲಿ ಇದೇ ಮೊದಲಾಗಿದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ ಗುಂಪಿನಲ್ಲಿರುವ ನಂಬರ್ ಅನ್ನು ಹ್ಯಾಕ್ ಮಾಡುವ ಮೂಲಕ ಗುಂಪಿನ ಸದಸ್ಯರ ವಿವರ ಪಡೆದು ವಂಚನೆ ಮಾಡಲಾಗುತ್ತಿದೆ ಎಂದು ಡಿಸಿಪಿ ಕೆಇ ಬೈಜು ತಿಳಿಸಿದ್ದಾರೆ.
ವಂಚಕರು ಅವರು ಸೇರಿರುವ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿರುವವರ ಸಂಖ್ಯೆಯನ್ನು ಹ್ಯಾಕ್ ಮಾಡಿರಬಹುದು. ಪೊಲೀಸ್ ವರದಿಯನ್ನು ಬ್ಯಾಂಕಿಗೆ ನೀಡಿದ ನಂತರ ದೂರುದಾರರು ಹಣವನ್ನು ಮರಳಿ ಪಡೆಯುತ್ತಾರೆ. ವಂಚನೆಗೊಳಗಾದ ಬ್ಯಾಂಕ್ ಖಾತೆಯನ್ನು ಗುರುತಿಸಲಾಗಿದೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಖಾತೆಗೆ ಇತರೆ ಹಣ ಬಂದಿದೆ. ಹೀಗಾಗಿ ಗುಜರಾತ್‌ನ ಬ್ಯಾಂಕ್ ಇದನ್ನು ಪರಿಶೀಲಿಸುತ್ತಿದೆ. ಗುಜರಾತ್ನಲ್ಲಿ ಖಾತೆಯೊಂದಕ್ಕೆ ಹೆಚ್ಚು ಹಣ ಹರಿದುಬಂದಿದೆ. ವಂಚಕರು ಗುಜರಾತ್‌ನಿಂದ ಮಹಾರಾಷ್ಟ್ರದ ಬ್ಯಾಂಕ್‌ಗೆ ಹಣವನ್ನು ವರ್ಗಾಯಿಸಿದ್ದಾರೆ. ವಂಚನೆ ಗುಂಪನ್ನು ಸಂಪರ್ಕಿಸಿರುವ ಇತರರ ಹೇಳಿಕೆಗಳನ್ನು ಸಹ ದಾಖಲಿಸಲಾಗುತ್ತದೆ. ಫೇಸ್‌ಬುಕ್‌ನಲ್ಲಿ ನಿಮಗೆ ಪರಿಚಯವಿಲ್ಲದವರ ರಿಕ್ವಸ್ಟ್ಗಳು ಬಂದರೆ ಅವುಗಳನ್ನು ನೀವು ಸ್ವೀಕರಿಸಬಾರದು ಎಂದು ಡಿಸಿಪಿ ಎಚ್ಚರಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಬಳಸಿ ನಕಲಿ ವಿಡಿಯೋ ಕಾಲ್ ಮೂಲಕ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ದೂರುದಾರರು ಕಳೆದುಕೊಂಡಿದ್ದ 40,000 ರೂ.ಗಳನ್ನು ಕೇರಳ ಪೊಲೀಸ್ ಸೈಬರ್ ಆಪರೇಷನ್ ವಿಭಾಗ ವಶಪಡಿಸಿಕೊಂಡಿದೆ. ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ವಿಡಿಯೋ ಕಾಲ್ ಮೂಲಕ ಹಣ ವಸೂಲಿ ಮಾಡಿರುವ ಪ್ರಕರಣ ಇದೇ ಮೊದಲ ಬಾರಿಗೆ ಕೇರಳದಲ್ಲಿ ಬೆಳಕಿಗೆ ಬಂದಿದೆ.
ಕೋಯಿಕ್ಕೋಡ್ ನಿವಾಸಿ ರಾಧಾಕೃಷ್ಣನ್ ಎಂಬುವರನ್ನು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಸ್ನೇಹಿತ ಎಂದು ತಪ್ಪಾಗಿ ಭಾವಿಸಿ ಅಪರಿಚಿತ ತಂಡ ಕರೆ ಮಾಡಿದೆ. ನಾನು ದುಬೈನಲ್ಲಿದ್ದು, ಸಂಬಂಧಿಕರ ಚಿಕಿತ್ಸೆಗೆ ಹಣದ ಅಗತ್ಯವಿದೆ. ದೇಶಕ್ಕೆ ಬಂದ ತಕ್ಷಣ ವಾಪಸ್ ಕೊಡುವುದಾಗಿ ವಂಚಕ ಹೇಳಿದ್ದಾನೆ. ಮೊದಲು 40,000 ಬೇಡಿಕೆ ಇಟ್ಟಿದ್ದು ರಾಧಾಕೃಷ್ಣನ್ ಕೊಟ್ಟಿದ್ದಾರೆ. ಆದರೆ, ಮತ್ತೆ 35,000 ರೂ.ಗೆ ಬೇಡಿಕೆ ಇಟ್ಟಾಗ ರಾಧಾಕೃಷ್ಣನ್‌ಗೆ ಅನುಮಾನ ಬಂದಿತ್ತು.
ನಂತರ ನೇರವಾಗಿ ಸ್ನೇಹಿತನನ್ನು ಸಂಪರ್ಕಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ರಾಧಾಕೃಷ್ಣನ್ ಅವರು ಸಹಾಯವಾಣಿ ಸಂಖ್ಯೆ 1930 ಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಕೇರಳ ಪೊಲೀಸರ ಸೈಬರ್ ಕಾರ್ಯಾಚರಣೆ ವಿಭಾಗವು ತನಿಖೆಯನ್ನು ಪ್ರಾರಂಭಿಸಿತು ಮತ್ತು ವಂಚಕರಿಂದ ಕಳೆದುಹೋದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡು ಅವರಿಗೆ ಹಿಂದಿರುಗಿಸಿತು.
ಎಚ್ಚರಿಕೆ ನೀಡಿದ ಪೊಲೀಸರು: ಅಪರಿಚಿತ ವಿಡಿಯೋ ಅಥವಾ ಆಡಿಯೋ ಕಾಲ್ ಮೂಲಕ ಹಣಕಾಸಿನ ನೆರವು ಕೋರಿದರೆ ಸ್ಪಂದಿಸಬೇಡಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೀವು ಅಂತಹ ನಕಲಿ ಕರೆಗಳನ್ನು ಸ್ವೀಕರಿಸಿದರೆ, ನೀವು ತಕ್ಷಣ ಕೇರಳ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಮಾಹಿತಿಯನ್ನು ತಿಳಿಸಬೇಕು ಮತ್ತು ಈ ಸೇವೆಯು ದಿನದ 24 ಗಂಟೆಗಳ ಕಾಲ ಲಭ್ಯವಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಎಐ ವಂಚನೆ ಪ್ರಕರಣ:ದೇಶದ ಹಲವೆಡೆ ಕೃತಕ ಬುದ್ಧಿಮತ್ತೆ ಬಳಸಿ ವಂಚನೆ ಪ್ರಕರಣಗಳು ವರದಿಯಾಗಿದ್ದವು. ಆದರೆ ಕೇರಳದಲ್ಲಿ ಇಂತಹ ಪ್ರಕರಣ ವರದಿಯಾಗಿರುವುದು ಇದೇ ಮೊದಲು. ವಂಚಕರು ಸಾಮಾಜಿಕ ಮಾಧ್ಯಮದಿಂದ ಫೋಟೋಗಳನ್ನು ಸಂಗ್ರಹಿಸುತ್ತಾರೆ ಮತ್ತು ಅವುಗಳನ್ನು ವಿಡಿಯೋ ಕರೆಗಳಿಗೆ ಬಳಸುತ್ತಾರೆ. ವಂಚಕರು ವಿಡಿಯೋ ಕರೆ ಮಾಡುವುದರಿಂದ ಸಾಮಾನ್ಯವಾಗಿ ನಾವು ಈ ಹಗರಣವನ್ನು ಗುರುತಿಸಲು ವಿಫಲರಾಗುತ್ತೇವೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮುಖ ಮತ್ತು ಧ್ವನಿಯನ್ನು ಬದಲಾಯಿಸುವ ಅನೇಕ ಅಪ್ಲಿಕೇಶನ್‌ಗಳಿವೆ. ಆದ್ದರಿಂದ ಜಾಗರೂಕರಾಗಿರಿ ಎಂದು ಸೈಬರ್ ತಜ್ಞರು ಜನರಿಗೆ ಕಿವಿ ಮಾತು ಹೇಳಿದ್ದಾರೆ.
ಓದಿ:ಪತಿ 'ಆ ವಿಷಯದಲ್ಲಿ' ಅಶಕ್ತ.. ವರದಕ್ಷಿಣೆ ಪಡೆದು ಮದುವೆ ಮಾಡಿಸಿ ವಂಚನೆ: ಮಹಿಳೆಯಿಂದ ಪೊಲೀಸರಿಗೆ ದೂರು