ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 6 ಮಂದಿ ದಾರುಣ ಸಾವು - ಪಶ್ಚಿಮಬಂಗಾಳದ ಪಟಾಕಿ ಕಾರ್ಖಾನೆ ದುರಂತ

ಪಶ್ಚಿಮ ಬಂಗಾಳದ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ.

ಪಶ್ಚಿಮಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
ಪಶ್ಚಿಮಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ

By ETV Bharat Karnataka Team

Published : Aug 27, 2023, 12:11 PM IST

Updated : Aug 27, 2023, 4:32 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) :ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ದತ್ತಪುಕುರ್​ದಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಇಂದು ಭಾರಿ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ದೇಹಗಳು ಕಾರ್ಖಾನೆಯಿಂದ ಹಾರಿ ಹೊರಭಾಗದಲ್ಲಿರುವ ಮರದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದತ್ತಪುಕುರ್​ ಪ್ರದೇಶದಲ್ಲಿನ ಈ ಕಾರ್ಖಾನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಗಣೇಶ ಚತುರ್ಥಿ ಮತ್ತು ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳ ತಯಾರಿಕೆ ಕಾರ್ಯ ನಡೆಯುತ್ತಿದೆ. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಡಿಮದ್ದು, ಪಟಾಕಿಗಳನ್ನು ದಾಸ್ತಾನು ಮಾಡಲಾಗಿದ್ದು, ಇವು ಸ್ಫೋಟಗೊಂಡು ದುರಂತ ಸಂಭವಿಸಿತು. ಪಟಾಕಿ ಕಾರ್ಖಾನೆಯಲ್ಲಿನ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ. ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ.

'ದೂರು ನೀಡಿದ್ದರೂ ಕ್ರಮವಿಲ್ಲ':"ಅಕ್ರಮವಾಗಿ ನಡೆಯುತ್ತಿರುವ ಈ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದೆ. ಅನಾಹುತ ಸಂಭವಿಸುವ ಬಗ್ಗೆ ಸ್ಥಳೀಯರು ಮೊದಲೇ ಅಧಿಕಾರಿಗಳ ಗಮನಕ್ಕೆ ತಂದು ಪ್ರತಿಭಟನೆ ಕೂಡ ನಡೆಸಿದ್ದರು. ಇಷ್ಟಾದರೂ ಕಾರ್ಖಾನೆ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಪಟಾಕಿ ದಾಸ್ತಾನು ಸ್ಫೋಟವಾಗಿದೆ. ಇಲ್ಲಿ ಹಲವಾರು ಮಹಿಳೆಯರು ಕೆಲಸ ಮಾಡುತ್ತಿದ್ದು, ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ" ಎಂದು ಸ್ಥಳೀಯರು ದೂರಿದರು.

ಮರ, ಪಕ್ಕದ ಮನೆ ಮೇಲೆಲ್ಲ ದೇಹದ ತುಂಡುಗಳು:ಕಾರ್ಖಾನೆಯ ಸಮೀಪದ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೇ, ಭೀಕರ ಸ್ಫೋಟದ ನಂತರ ಪಕ್ಕದ ಮನೆಗಳು ಮತ್ತು ಮರಗಳ ಮೇಲೂ ಕೆಲ ದೇಹದ ತುಂಡುಗಳು ಕಂಡುಬಂದಿದ್ದು, ಸ್ಫೋಟದ ತೀವ್ರತೆಯು ಸ್ಥಳೀಯರಲ್ಲಿ ಭಾರಿ ಆತಂಕ ಉಂಟುಮಾಡಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಕ್ರಮ ಕಾರ್ಖಾನೆಯಲ್ಲಿ ಪಟಾಕಿ ತಯಾರಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಜರುಗಿಸದ ಕಾರಣ ಭೀಕರ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದರು.

ಹಿಂದಿನ ದುರಂತ:ಮೇ 16 ರಂದು ಪೂರ್ವ ಮಿಡ್ನಾಪುರದಲ್ಲಿ ಇದೇ ರೀತಿಯ ಸ್ಫೋಟದಲ್ಲಿ ಒಂಬತ್ತು ಸಾವಾಗಿ, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕಟ್ಟಡವೇ ಕುಸಿದಿತ್ತು. ಅಕ್ರಮ ಪಟಾಕಿ ಕಾರ್ಖಾನೆಯ ಮಾಲೀಕರು ಒತ್ತಡಕ್ಕೆ ಒಡಿಶಾದ ಕಟಕ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೂರು ಅಕ್ರಮ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸಿ, ಹಲವು ಕಾರ್ಮಿಕರ ಪ್ರಾಣಾಹುತಿಯಾಗಿದೆ.

ಇದನ್ನೂ ಓದಿ:ಕೋಲಾರ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

Last Updated : Aug 27, 2023, 4:32 PM IST

ABOUT THE AUTHOR

...view details