ಮಧುರೈ (ತಮಿಳುನಾಡು):ತಮಿಳುನಾಡಿನ ಮಧುರೈ ರೈಲ್ವೆ ನಿಲ್ದಾಣದ ಸಮೀಪ ರೈಲಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ರೈಲಿನ ಬೆಂಕಿಯ ಜ್ವಾಲೆ ಹಾಗೂ ಪ್ರಯಾಣಿಕರ ಕಿರುಚಾಟ ಕೇಳಿಯೇ ನಿದ್ರೆಯಲ್ಲಿದ್ದ ಸ್ಥಳೀಯ ಜನರು ಎಚ್ಚರಗೊಂಡಿದ್ದಾರೆ. ಈ ಅಗ್ನಿಯ ಜ್ವಾಲೆ ಎಷ್ಟಿತ್ತೆಂದರೆ ರೈಲಿನ ಸಮೀಪ ಕೂಡ ಜನರಿಗೆ ಹೋಗಲು ಸಾಧ್ಯವಾಗಿಲ್ಲ.
ತಮಿಳುನಾಡಿನ ರಾಮೇಶ್ವರಂ ತೆರಳುತ್ತಿದ್ದ ಖಾಸಗಿ ಪಾರ್ಟಿ ಕೋಚ್ನಲ್ಲಿ ಬೆಳಗ್ಗೆ 5.15ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ನಿನ್ನೆ (ಆ. 25) ನಾಗರಕೋಯಿಲ್ ಜಂಕ್ಷನ್‌ನಲ್ಲಿ ರೈಲು ಸಂಖ್ಯೆ 16730 (ಪುನಲೂರ್-ಮಧುರೈ ಎಕ್ಸ್‌ಪ್ರೆಸ್)ಗೆ ಈ ಕೋಚ್ ಜೋಡಿಸಲಾಗಿತ್ತು. ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇದನ್ನು ಬೇಪರ್ಡಿಸಿ ನಿಲ್ಲಿಸಲಾಗಿತ್ತು. ಆದರೆ, ಬೋಗಿಯಲ್ಲಿದ್ದ ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡಿದ್ದೇ ಈ ಬೆಂಕಿ ಅವಘಡಕ್ಕೆ ಕಾರಣ ಎಂದು ದಕ್ಷಿಣ ರೈಲ್ವೆ ಹೇಳಿದೆ.
ರೈಲು ಅಗ್ನಿ ದುರಂತ ನಡೆದ ಮಧುರೈ-ಬೋಡಿ ಲೈನ್ ರೈಲ್ವೆ ಯಾರ್ಡ್‌ಗೆ ಹೊಂದಿಕೊಂಡಂತೆ ವಾಸಿಸುತ್ತಿದ್ದ ಸ್ಥಳೀಯರು ಬೆಂಕಿಯ ಜ್ವಾಲೆ ನೋಡಿ ಬೆಚ್ಚಿಬಿದ್ದಿದ್ದಾರೆ. ಬೆಂಕಿಯಿಂದ ರೈಲಿನಲ್ಲಿ ಸಿಲುಕಿದವರ ರೋದನವನ್ನೇ ಕೇಳಿಯೇ ಹಾಸಿಗೆಯಿಂದ ಎದ್ದು ಓಡಿ ಬಂದಿದ್ದಾರೆ. ಅಗ್ನಿ ದುರಂತ ವಿಷಯ ತಿಳಿಸಲು ಕೆಲವರು ಸ್ಟೇಷನ್ ಮಾಸ್ಟರ್ ಕಚೇರಿಯತ್ತ ಸುಮಾರು ಒಂದು ಕಿ.ಮೀ ದೂರ ಧಾವಿಸಿದರೆ, ಕೆಲವರು ಸಮೀಪದ ಅಗ್ನಿಶಾಮಕ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಜ್ವಾಲೆಗಳಿಂದ ಬೋಗಿ ಸಮೀಪ ತೆರಳಲು ಸಹ ತಮಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಾಣ ಉಳಿಸಿಕೊಳ್ಳಲು ರೈಲಿನಿಂದ ಜಿಗಿದ ಜನ:ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬರಾದ ಮಧುರೈ ನಿವಾಸಿ ಮನ್ನನ್ ಮಾತನಾಡಿ, "ನಾನು ರೈಲು ಬೆಂಕಿ ದುರಂತ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದೇನೆ. ಮುಂಜಾನೆ ಜನರ ಕಿರುಚಾಟವನ್ನು ಕೇಳಿ ನಾನು ನಿದ್ರೆಯಿಂದ ಎದ್ದು ಹೊರಬಂದೆ. ಹಾಸಿಗೆ ಬಿಟ್ಟು ಸ್ಥಳಕ್ಕೆ ಧಾವಿಸಿದಾಗ ಕೆಲವರು ಉರಿಯುತ್ತಿರುವ ರೈಲಿನಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿಯುವುದನ್ನು ಕಂಡೆ. ಬಹುಪಾಲು ಸಂತ್ರಸ್ತರು ಸ್ಲೀಪರ್ ಕಂಪಾರ್ಟ್‌ಮೆಂಟ್‌ನ ಮೇಲ್ಭಾಗದಲ್ಲಿ ಮಲಗಿದ್ದರು'' ಎಂದು ಭಯಾನಕ ದೃಶ್ಯವನ್ನು ವಿವರಿಸಿದರು.