ವಿಜಯವಾಡ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಮಾಜಿ ಸಿಎಂ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪೊಲೀಸರು ಇಂದು ವಿಜಯವಾಡದ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕೌಶಲ್ಯಾಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ದುರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ನಂದ್ಯಾಲದಲ್ಲಿ ಬಂಧಿಸಿತ್ತು. ಬಳಿಕ ಕುಂಚನಪಲ್ಲಿಯಲ್ಲಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಚೇರಿಯಲ್ಲಿ 10 ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಇಂದು ನಸುಕಿನ ಜಾವ 3:40ಕ್ಕೆ ವೈದ್ಯಕೀಯ ಪರೀಕ್ಷೆಗೆ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸುಮಾರು 50 ನಿಮಿಷಗಳ ಕಾಲ ನಡೆದ ವೈದ್ಯಕೀಯ ಪರೀಕ್ಷೆಗಳ ನಂತರ ಭ್ರಷ್ಟಾಚಾರ ನಿಗ್ರಹ ದಳದ ನ್ಯಾಯಾಲಯಕ್ಕೆ ಬಿಗಿ ಭದ್ರತೆಯ ನಡುವೆ ಹಾಜರುಪಡಿಸಲಾಯಿತು.
ಸುಪ್ರೀಂ ಕೋರ್ಟ್ ವಕೀಲ ಸಿದ್ದಾರ್ಥ್ ಲೂಥ್ರಾ ಮತ್ತು ತಂಡ ನಾಯ್ಡು ಅವರನ್ನು ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದೆ. ಟಿಡಿಪಿಯ ಹಲವಾರು ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ನ್ಯಾಯಾಲಯದ ಸಂಕೀರ್ಣದಲ್ಲಿ ಸೇರಿದ್ದರು. ಪುತ್ರ ನಾರಾ ಲೋಕೇಶ್, ಪತ್ನಿ ನಾರಾ ಭುವನೇಶ್ವರಿ ಕಂಡುಬಂದರು.