ನವದೆಹಲಿ: ಧರ್ಮ ಮತ್ತು ನಂಬಿಕೆಯ ಹೊರತಾಗಿ ತಮ್ಮಿಚ್ಛೆಗೆ ಅನುಸಾರವಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಮದುವೆಯ ಹಕ್ಕು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ. ವಯಸ್ಕರ ಮದುವೆ ವಿಚಾರದಲ್ಲಿ ನಿರ್ದೇಶಿಸುವ ಹಕ್ಕು ಪೋಷಕರು, ಸಮಾಜ ಹಾಗು ರಾಜ್ಯಕ್ಕೂ ಇಲ್ಲ ಎಂದು ತಿಳಿಸಿದೆ.
ಮದುವೆಯ ವಿಚಾರದಲ್ಲಿ ಹುಡುಗಿಯ ಕುಟುಂಬ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೌರಭ್ ಬ್ಯಾನರ್ಜಿ ಅವರಿದ್ಧ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿತು. ಅಲ್ಲದೇ, ಜೋಡಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ಕಾನೂನುಬದ್ದ ವಯೋಮಿತಿ ದಾಟಿರುವ ವಯಸ್ಕ ಜೋಡಿ ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿಶೇಷ ಮದುವೆಯ ಹಕ್ಕು 1954 ಅಡಿ ವಿವಾಹವಾಗಿದ್ದಾರೆ. ಆದರೆ, ಈ ಮದುವೆಗೆ ಯುವತಿಯ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದರು.
ಯಾವುದೇ ವ್ಯಕ್ತಿಯನ್ನು ತನ್ನ ಇಚ್ಛೆಗೆ ಅನುಗುಣವಾಗಿ ಮದುವೆಯಾಗುವ ಹಕ್ಕನ್ನು ಸಂವಿಧಾನದ 21ನೇ ವಿಧಿ ನೀಡಿದೆ. ಈ ವಿಧಿಯು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಜೀವಿಸುವ ಹಕ್ಕು ಕೊಟ್ಟಿದೆ. ಅಲ್ಲದೆ, ವ್ಯಕ್ತಿಯ ಆಯ್ಕೆ, ಅದರಲ್ಲೂ ವಿಶೇಷವಾಗಿ ಮದುವೆ ವಿಚಾರದ ಆಯ್ಕೆಯನ್ನು ಸಂರಕ್ಷಿಸಲಾಗಿದೆ ಎಂದರು.