ಜಮ್ಮು ಮತ್ತು ಕಾಶ್ಮೀರ :ಪುಲ್ವಾಮಾದ ಮಿಟ್ರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಚರಣೆ ಪ್ರಾರಂಭಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 28 ರಂದು ಪುಲ್ವಾಮಾದಲ್ಲಿ ನಡೆದ ಕಾಶ್ಮೀರಿ ಪಂಡಿತನ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರನನ್ನು ಹತ್ಯೆ ಮಾಡಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದರು. ಪುಲ್ವಾಮಾ ಜಿಲ್ಲೆಯ ಅವಂತಿಪೋರ್‌ನ ಪದಗಂಪೋರಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪುಲ್ವಾಮಾದ ಉಗ್ರಗಾಮಿ ಆದಿಲ್ ಮುಷ್ತಾಕ್ ಭಟ್ ಹತನಾಗಿದ್ದಾನೆ. ಈತ ಅಕಿಬ್ ಎ ವರ್ಗದ ಉಗ್ರಗಾಮಿಯಾಗಿದ್ದು, ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಜತೆ ಕೆಲಸ ಮಾಡುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಟಿಆರ್ಎಫ್ ಜೊತೆ ಕೆಲಸ ಮಾಡುತ್ತಿದ್ದ ಎಂದು ಕಾಶ್ಮೀರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ :ಕಾಶ್ಮೀರಿ ಪಂಡಿತ ಸಹೋದರರ ಮೇಲೆ ಉಗ್ರರ ದಾಳಿ.. ಓರ್ವ ಬಲಿ, ಮತ್ತೋರ್ವನ ಸ್ಥಿತಿ ಗಂಭೀರ
ಫೆಬ್ರವರಿ 26 ರಂದು ಕಾಶ್ಮೀರಿ ಪಂಡಿತ (ಸಂಜಯ್ ಶರ್ಮಾ) ಅವರು ಪುಲ್ವಾಮಾ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಪರಿಚಿತ ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಶರ್ಮಾ ಅವರು ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.