ಬಿಜಾಪುರ್(ಛತ್ತೀಸ್ಗಢ) :ನಕ್ಸಲರು-ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರೆ, 9 ಮಂದಿ ನಕ್ಸಲರು ಹತರಾಗಿದ್ದಾರೆ. ಉಳಿದಂತೆ 12 ಮಂದಿ ಸೈನಿಕರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಭದ್ರತಾ ಪಡೆ ತೆರಳಿದ್ದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ.
ಶನಿವಾರ ಬೆಳಗ್ಗೆಯಿಂದಲೇ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಎನ್ಕೌಂಟರ್ ನಡೆದಿತ್ತು. ಹುತಾತ್ಮರಾದ ಯೋಧರಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪಡೆಗೆ ಸೇರಿದ್ದು, ಉಳಿದವರು ಜಿಲ್ಲಾ ರಿಸರ್ವ್ ಗಾರ್ಡ್(DRG)ನವರು ಎಂದು ತಿಳಿದು ಬಂದಿದೆ.
ಮಾಹಿತಿ ನೀಡಿದ ನಕ್ಸಲ್ ನಿಗ್ರಹ ದಳದ ಡಿಐಜಿ ಬಿಜಾಪುರದ ಸುಕ್ಮಾ ಬಾರ್ಡರ್ನಲ್ಲಿ ಅಡಗಿ ಕುಳಿತಿದ್ದ ನಕ್ಸಲರ ವಿರುದ್ಧ ಸಿಆರ್ಪಿಎಫ್, ಡಿಆರ್ಜಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ನಕ್ಸಲರು ಏಕಾಏಕಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಈ ಘಟನೆ ನಡೆದಿದೆ ಎಂದು ಡಿಜಿಪಿ ಡಿಎಂ ಅವಾಸ್ಥಿ ತಿಳಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾರ್ಯಾಚರಣೆಯಲ್ಲಿ 9 ಮಂದಿ ನಕ್ಸಲರು ಸಾವನ್ನಪ್ಪಿದ್ದರೆ, 15ಕ್ಕೂ ಹೆಚ್ಚು ನಕ್ಸಲರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಾರ್ಯಾಚರಣೆ ಸ್ಥಳದಲ್ಲಿ 250ಕ್ಕೂ ಅಧಿಕ ನಕ್ಸಲರು ಇದ್ದರು ಎಂದು ಬಸ್ತಾರ್ ಐಜಿ ಪಿ. ಸುಂದರ್ರಾಜ್ ಮಾಹಿತಿ ನೀಡಿದ್ದಾರೆ.
ಚಿಕಿತ್ಸೆಗೆ ಎಲ್ಲ ರೀತಿಯ ಸೌಲಭ್ಯ:ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಗಾಯಗೊಂಡಿರುವ ಯೋಧರಿಗೆ ಎಲ್ಲ ರೀತಿಯ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಇಂಡಿಯನ್ ಏರ್ಪೋರ್ಸ್ನ ಮಿಗ್-17 ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ ಸಂತಾಪ:ನಕ್ಸಲ್ ಅಟ್ಟಹಾಸದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ನಕ್ಸಲರ ವಿರುದ್ಧ ಹೋರಾಡುವಾಗ ಹುತಾತ್ಮರಾದ ಯೋಧರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ. ಧೈರ್ಯಶಾಲಿ ಹುತಾತ್ಮ ಯೋಧರ ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.