ಜಮ್ಮು: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಕಾಂಗ್ರೆಸ್‌ನ ಆಂತರಿಕ ವಿಷಯವಾಗಿದೆ. ರಾಜಕೀಯ, ಪ್ರಜಾಸತ್ತಾತ್ಮಕತೆ, ದೇಶದ ಸಾಮಾಜಿಕ ವಾತಾವರಣವನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧವೇ ನಮ್ಮ ಹೋರಾಟ ಎಂದು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಿರೋಧ ಪಕ್ಷಗಳಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎತ್ತುವ ಹಕ್ಕು ಬಿಜೆಪಿಗೆ ಇಲ್ಲ. ಬಿಜೆಪಿಯಲ್ಲಿ ಅಧ್ಯಕ್ಷರ ಚುನಾವಣೆ ಹೇಗೆ ನಡೆಯುತ್ತದೆ ಎಂದು ಯಾರಿಗಾದರೂ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಏಳು ದಶಕಗಳಲ್ಲಿ ಕಾಂಗ್ರೆಸ್ ಕಟ್ಟಿದ ಪ್ರಜಾಸತ್ತಾತ್ಮಕ ಸಂಸ್ಥೆಗಳು ದುರ್ಬಲಗೊಂಡಿವೆ. ನಮ್ಮ ನಿಜವಾದ ಹೋರಾಟ ದೇಶದ ರಾಜಕೀಯ, ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ವಾತಾವರಣವನ್ನು ಹಾಳು ಮಾಡುತ್ತಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧವಾಗಿದೆ ಎಂದು ಖರ್ಗೆ ಹೇಳಿದರು.
ಇಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಲು ಕಾಂಗ್ರೆಸ್ ಪಕ್ಷವು ಮುಂಚೂಣಿಯಲ್ಲಿದೆ. ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ಸರ್ಕಾರದವರೆಗೆ ಕಾಂಗ್ರೆಸ್ ಮಾಡಿದ ಆಸ್ತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾರಾಟ ಮಾಡಿದೆ.
ಕಾಂಗ್ರೆಸಿಗರು ಮುಂದಾಳತ್ವ ವಹಿಸಿ ಎಚ್ಚೆತ್ತುಕೊಂಡು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಜೊತೆಗೂಡಬೇಕು ಎಂದು ಖರ್ಗೆ ಕರೆ ನೀಡಿದರು. ಬಿಜೆಪಿಯಲ್ಲಿ ಅಧ್ಯಕ್ಷರ ಚುನಾವಣೆ ಯಾವಾಗ ಮತ್ತು ಹೇಗೆ ನಡೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಇತರರ ಬಗ್ಗೆ ವಿಶೇಷವಾಗಿ ದೇಶದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ಪಕ್ಷವಾದ ಕಾಂಗ್ರೆಸ್ ಬಗ್ಗೆ ಪ್ರಶ್ನೆ ಮಾಡಲು ಅವರಿಗೆ ಯಾವ ಹಕ್ಕಿದೆ ಎಂದು ಖರ್ಗೆ ಪ್ರಶ್ನಿಸಿದರು.