ಚೆನ್ನೈ (ತಮಿಳುನಾಡು):ದೇಶದಲ್ಲಿ ಕೋವಿಡ್ ಸಾವು-ನೋವು ಹೆಚ್ಚಲು ಭಾರತೀಯ ಚುನಾವಣಾ ಆಯೋಗವೇ (ಇಸಿಐ) ಕಾರಣ ಎಂದು ಆರೋಪಿಸಿರುವ ಮದ್ರಾಸ್ ಹೈಕೋರ್ಟ್, ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ 'ಕೊಲೆ ಪ್ರಕರಣ' ದಾಖಲಿಸಬೇಕು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದೆ.
ಕೊರೊನಾ ಎರಡನೇ ಅಲೆಯ ಸುಳಿಯಲ್ಲಿ ದೇಶವು ಸಿಲುಕುತ್ತಿರುವ ವೇಳೆಯಲ್ಲಿ ತಮಿಳುನಾಡು ಸೇರಿದಂತೆ ಇತರ ಕೆಲ ರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ ಸೇರಿದಂತೆ ದೊಡ್ಡ ಮಟ್ಟದ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದಕ್ಕಾಗಿ ನ್ಯಾಯಾಲಯ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಾಂಕ್ರಾಮಿಕದ 2ನೇ ಅಲೆಗೆ ಚುನಾವಣಾ ಆಯೋಗವು 'ಏಕೈಕ ಜವಾಬ್ದಾರಿಯಾಗಿದೆ' ಎಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಆರೋಪಿಸಿದ್ದಾರೆ.