ಹೈದರಾಬಾದ್: ಇಲ್ಲಿನ ಕ್ಯಾಸಿನೊ ಡೀಲರ್ಗಳು ಮತ್ತು ಏಜೆಂಟ್ಗಳಿಗೆ ಸೇರಿದ ಏಳು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ಹಹಣೆ ಕಾಯ್ದೆ (ಫೆಮಾ)ಯ ಉಲ್ಲಂಘನೆಯ ಆರೋಪದಲ್ಲಿ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ- ಮಾಧವ ರೆಡ್ಡಿ ಮತ್ತು ಪ್ರವೀಣ ಚಿಕೋಟಿ ಹೆಸರಿನ ಹೈದರಾಬಾದ್ನ ವ್ಯಕ್ತಿಗಳಿಬ್ಬರು ಹಾಗೂ ಇನ್ನೂ ಕೆಲವರು ಸೇರಿಕೊಂಡು ನೇಪಾಳದಲ್ಲಿ ಜೂಜಾಟಗಳ ವ್ಯವಸ್ಥೆ ಮಾಡುತ್ತಿದ್ದು, ಈ ವ್ಯವಹಾರದಲ್ಲಿ ಹವಾಲಾ ಮೂಲಕ ಹಣ ಸಾಗಾಟವಾಗಿರುವುದು ಕಂಡು ಬಂದಿದ್ದರಿಂದ ಇಡಿ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಜೂನ್ ತಿಂಗಳಲ್ಲಿ ಭಾರತ-ನೇಪಾಳ ಗಡಿಯಲ್ಲಿ ಆಯೋಜಿಸಲಾಗಿದ್ದ ಜೂಜಾಟವೊಂದರ ಪ್ರಕರಣ ಕುರಿತಾಗಿ ಈ ದಾಳಿ ನಡೆದಿದೆ. ಏಜೆಂಟರು ಗ್ರಾಹಕರಿಗೆ 3 ಲಕ್ಷ ರೂಪಾಯಿಗಳಲ್ಲಿ ನಾಲ್ಕು ದಿನಗಳ ಗ್ಯಾಂಬ್ಲಿಂಗ್ ಪ್ಯಾಕೇಜ್ ಟೂರ್ ಆಯೋಜಿಸಿದ್ದರು. ಇದರಲ್ಲಿ ವಿಮಾನ ಪ್ರಯಾಣ, ಹೋಟೆಲ್ ವಾಸ್ತವ್ಯ, ಆಹಾರ, ಕುಡಿತ ಮತ್ತು ಮೋಜು ಮಸ್ತಿಗಳೆಲ್ಲ ಸೇರಿದ್ದವು. ಆದರೆ, ಗ್ಯಾಂಬ್ಲಿಂಗ್ನಲ್ಲಿ ಗೆದ್ದವರಿಗೆ ಹವಾಲಾ ಮೂಲಕ ಹಣ ಪಾವತಿಸಲಾಗಿತ್ತು ಎಂದು ಇಡಿ ವರದಿಗಳು ತಿಳಿಸಿವೆ. ಗ್ಯಾಂಬ್ಲಿಂಗ್ ಇವೆಂಟ್ ಬಗ್ಗೆ ಆರೋಪಿ ಚಿಕೋಟಿ ಪ್ರವೀಣ ಈತನ ಇನ್ಸ್ಟಾ ಪೇಜ್ನಲ್ಲೂ ಶೇರ್ ಮಾಡಲಾಗಿತ್ತು.