ಕರ್ನಾಟಕ

karnataka

ETV Bharat / bharat

ದೆಹಲಿ ಮದ್ಯ ಹಗರಣ: ಕೆಸಿಆರ್​ ಪುತ್ರಿ ಕವಿತಾಗೆ ಮತ್ತೆ ಇಡಿ ನೋಟಿಸ್​ ಜಾರಿ - ಜಾರಿ ನಿರ್ದೇಶನಾಲಯ

ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಪುತ್ರಿ ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.

ED issues notice to KCRs daughter Kavitha once again
ದೆಹಲಿ ಮದ್ಯ ಹಗರಣ: ಕೆಸಿಆರ್​ ಪುತ್ರಿ ಕವಿತಾಗೆ ಮತ್ತೆ ಇಡಿ ನೋಟಿಸ್​ ಜಾರಿ

By ETV Bharat Karnataka Team

Published : Sep 14, 2023, 8:11 PM IST

ಹೈದರಾಬಾದ್​ (ತೆಲಂಗಾಣ): ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​​) ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಪುತ್ರಿ, ವಿಧಾನ ಪರಿಷತ್​ ಸದಸ್ಯೆ ಕವಿತಾ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ದೆಹಲಿ ಸರ್ಕಾರದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ. ವಿಷಯವನ್ನು ಖುದ್ದು ಕವಿತಾ ಖಚಿತಪಡಿಸಿದ್ದಾರೆ. ''ಇಡಿ ನೋಟಿಸ್ ​​ಅನ್ನು ಮೋದಿ ನೋಟಿಸ್''​ ಎಂದೂ ಕಿಡಿಕಾರಿದ್ದಾರೆ.

ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​​ ನೇತೃತ್ವದ ದೆಹಲಿ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ತನ್ನ ಅಬಕಾರಿ ನೀತಿಯನ್ನು ಸರ್ಕಾರ ವಾಪಸ್​ ಪಡೆದಿದೆ. ಈ ಕುರಿತು ಕೇಂದ್ರದ ತನಿಖಾ ಸಂಸ್ಥೆಗಳ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದೆ.

ಇದೀಗ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ, ಎಂಎಲ್​ಸಿ ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು 'ಮೋದಿ ನೋಟಿಸ್'​ ಸ್ವೀಕರಿಸಿದ್ದೇನೆ.​ ಇದೊಂದು ರಾಜಕೀಯ ಪೇರಿತ ಹಾಗೂ ದ್ವೇಷದಿಂದ ಬಂದಿರುವ ನೋಟಿಸ್​ ಆಗಿದೆ. ಅಲ್ಲದೇ, ರಾಜಕೀಯ ಪಕ್ಷದ ಸಾಧನೆಯ ಭಾಗವಾಗಿದೆ ಎಂದು ಟೀಕಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಧಾರಾವಾಹಿ ರೀತಿಯಲ್ಲಿ ಇದನ್ನು ಎಳೆಯಲಾಗುತ್ತಿದೆ. ನಮ್ಮ ಕಾನೂನು ತಂಡದ ಸಲಹೆ ಮೇರೆಗೆ ನಾವು ಮುಂದುವರೆಯುತ್ತೇವೆ. ಈ ನೋಟಿಸ್​ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿಲ್ಲ. ತೆಲಂಗಾಣದಲ್ಲಿ ಮುಂಬರುವ ಚುನಾವಣೆ ಕುರಿತು ನಿರ್ಮಾಣವಾಗಿರುವ ವಾತಾವರಣವನ್ನು ಗಮನಿಸಿ ರಾಜಕೀಯವಾಗಿ ನೋಟಿಸ್​ ನೀಡಲಾಗಿದೆ. ಇದು ಇನ್ನಷ್ಟು ಮುಂದುವರೆಯಲಿದೆ ಎಂಬುವುದು ಗೊತ್ತಿಲ್ಲ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಬಾರದು. ತೆಲಂಗಾಣ ಜನತೆ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕವಿತಾ ಹೇಳಿದ್ದಾರೆ.

ಇದೇ ವೇಳೆ, ಬಿಆರ್​ಎಸ್ ಹಾಗೂ ಕಾಂಗ್ರೆಸ್​ ಒಂದಾಗಿರುವುದರಿಂದ ನೋಟಿಸ್​ ಬರುವುದು ನಿಂತಿದೆ ಎಂಬ ಕಾಂಗ್ರೆಸ್​ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕವಿತಾ, ನಾವು ಯಾರನ್ನೂ ಭೇಟಿ ಮಾಡಿಲ್ಲ. ನಾನು ಯಾರನ್ನಾದರೂ ಭೇಟಿ ಮಾಡಿದ್ದರೆ, ಅದು ತೆಲಂಗಾಣ ಹಾಗೂ ಭಾರತ ಜನತೆಯನ್ನೂ ಮಾತ್ರ. ಎರಡು ರಾಷ್ಟ್ರಗಳ ಪಕ್ಷಗಳಿಗೆ ಕೆಸಿಆರ್​ ಅವರ ಬಗ್ಗೆ ಭಯ ಶುರುವಾಗಿದೆ. ತೆಲಂಗಾಣದ ಜನತೆ ಕೆಸಿಆರ್​ ಅವರನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ಆತಂಕದಿಂದ ಬೇರೆ-ಬೇರೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಈ ಹಿಂದೆ ಕೂಡ ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಗಂಟೆಗಳ ಕಾಲ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದವು.

ಇದನ್ನೂ ಓದಿ:ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ

ABOUT THE AUTHOR

...view details