ರಾಯ್ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿ ಸೇರಿದಂತೆ ಇತರರಿಗೆ ಸೇರಿದ 152 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಸಿಎಂ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ, ಅಮಾನತುಗೊಂಡ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಕಲ್ಲಿದ್ದಲು ಉದ್ಯಮಿ ಸೂರ್ಯಕಾಂತ್ ತಿವಾರಿ ಅವರಿಗೆ ಸೇರಿದ ಆಸ್ತಿ ಇದಾಗಿದೆ. ಇದರಲ್ಲಿ ನಗದು, ಆಭರಣಗಳು, ಫ್ಲಾಟ್‌ಗಳು, ಕಲ್ಲಿದ್ದಲು ವಾಷರಿಸ್ ಮತ್ತು ಜಮೀನುಗಳು ಸಹ ಸೇರಿವೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬಳಿಕ ಇಡಿ ಅಧಿಕಾರಿಗಳು ಒಟ್ಟಾರೆ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.