ರೋಹ್ಟಕ್ (ಹರಿಯಾಣ) : ಉತ್ತರ ಭಾರತದಲ್ಲಿ ಶನಿವಾರ (ಇಂದು) ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ಇದರ ತೀವ್ರತೆಯು 3.2 ಆಗಿತ್ತು. ಬೆಳಗಿನ ಜಾವ 3.57ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಹರಿಯಾಣ ಮಾತ್ರವಲ್ಲದೇ, ಪಂಜಾಬ್, ದೆಹಲಿ ಮತ್ತು ಚಂಡೀಗಢದಲ್ಲಿ ಸಹ ಭೂಮಿ ಕಂಪಿಸಿದೆ.
ಭೂಕಂಪನದ ತೀವ್ರತೆ ಹೆಚ್ಚಿದ್ದರೆ ಹಾನಿ ಸಂಭವಿಸುತ್ತಿತ್ತು. ಆದರೆ, ತೀವ್ರತೆ ಕಡಿಮೆ ಇರುವುದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ. ಇದಕ್ಕೂ ಮುನ್ನ ಅಂದ್ರೆ ಜೂನ್ 18 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮೂರು ಬಾರಿ ಭೂಕಂಪನದ ಅನುಭವವಾಗಿತ್ತು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿಯೂ ಲಘು ಕಂಪನ ಸಂಭವಿಸಿದ ಅನುಭವವಾಗಿತ್ತು. ಆ ವೇಳೆ ಸಹ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ದೋಡಾದಲ್ಲಿ ಮುಂಜಾನೆ 3.50ಕ್ಕೆ ಮೊದಲ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿತ್ತು.
ಇದನ್ನೂ ಓದಿ :ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ : ವಿಡಿಯೋ
ಇದಕ್ಕೂ ಮುನ್ನ ಜೂನ್ 13 ರಂದು ದೆಹಲಿ ಎನ್‌ಸಿಆರ್‌ನಲ್ಲಿಯೂ ಭೂಕಂಪನವಾಗಿತ್ತು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಂದಾಜಿಸಲಾಗಿತ್ತು. ಹಾಗೆಯೇ, ಹಿಮಾಚಲ ಪ್ರದೇಶ, ಚಂಡೀಗಢ, ಪಂಜಾಬ್ ಮತ್ತು ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿತ್ತು.