ಕರ್ನಾಟಕ

karnataka

By ETV Bharat Karnataka Team

Published : Sep 5, 2023, 5:29 PM IST

ETV Bharat / bharat

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ ವೈದ್ಯ.. ಎಲ್ಲಿದೆ ಗೊತ್ತಾ ಆ ಕ್ಲಿನಿಕ್​!

ಮಧ್ಯಪ್ರದೇಶದ ಇಂದೋರ್​ನಲ್ಲಿ ವೈದ್ಯರೊಬ್ಬರು ತಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ್ದಾರೆ. ಚಿಕ್ಕ, ರಾತ್ರಿ ಧರಿಸುವ ಉಡುಗೆಗಳಲ್ಲಿ ಕ್ಲಿನಿಕ್​ಗೆ ಬರದಂತೆ ಸೂಚನಾ ಫಲಕ ಹಾಕಿದ್ದಾರೆ.

ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ ವೈದ್ಯ
ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ ವೈದ್ಯ

ಇಂದೋರ್ (ಮಧ್ಯಪ್ರದೇಶ) :ಕೆಲವು ಧಾರ್ಮಿಕ ಸ್ಥಳಗಳಲ್ಲಿ ಅರ್ಧಂಬರ್ಧ ದೇಹ ಕಾಣಿಸುವ ದಿರಿಸು ಧರಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಕೆಲ ರಾಷ್ಟ್ರಗಳಲ್ಲಿ ಇಂತಹ ಬಟ್ಟೆಗಳನ್ನು ಸ್ತ್ರೀಯರು ತೊಡುವುದೇ ಅಪರಾಧ. ಆದರೆ, ಇಲ್ಲೊಬ್ಬ ವೈದ್ಯರು ತಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ವಸ್ತ್ರಸಂಹಿತೆ ರೂಪಿಸಿದ್ದಾರೆ. ಇಂತಹ ಬಟ್ಟೆ ತೊಟ್ಟು ಬರಬೇಡಿ ಎಂದು ಸೂಚನಾ ಫಲಕ ಹಾಕಿದ್ದಾರೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಜನರಲ್ ಫಿಸಿಷಿಯನ್ ಆಗಿ ಆಸ್ಪತ್ರೆ ನಡೆಸುತ್ತಿರುವ ಡಾ.ಜಿ.ಡಿ ಮಲಾನಿ ಇಂಥದ್ದೊಂದು ನಿಯಮ ರೂಪಿಸಿದ ವೈದ್ಯರು. ಆಸ್ಪತ್ರೆಗೆ ತಪಾಸಣೆಗೆ ಬರುವ ರೋಗಿಗಳು ನೀಡಿದ ದೂರಿನನ್ವಯ ಈ ನಿಯಮವನ್ನು ಅವರು ಚಾಲ್ತಿಗೆ ತಂದಿದ್ದಾರೆ.

ಆಸ್ಪತ್ರೆಗೆ ಹೀಗೆ ಬರುವಂತಿಲ್ಲ :ವೈದ್ಯ ಮಲಾನಿ ಅವರು ಕಳೆದ 10 ವರ್ಷಗಳಿಂದ ಆಸ್ಪತ್ರೆ ನಡೆಸುತ್ತಿದ್ದು, ಇಲ್ಲಿಗೆ ಬರುವ ರೋಗಿಗಳು ಮನೆಯಲ್ಲಿ ಧರಿಸಿದ ಬಟ್ಟೆಗಳಲ್ಲೇ ಆಸ್ಪತ್ರೆಗೆ ಬರುತ್ತಿದ್ದರು. ಇದು ಕೆಲ ಮಹಿಳಾ ರೋಗಿಗಳಿಗೆ ಮುಜುಗರ ತಂದಿದೆ. ಈ ಬಗ್ಗೆ ಮಲಾನಿ ಅವರ ಬಳಿ ದೂರಿದ್ದಾರೆ. ಬಳಿಕ ವೈದ್ಯರು ವಸ್ತ್ರಸಂಹಿತೆಯ ಬೋರ್ಡ್​ ಹಾಕಿಸಿದ್ದಾರೆ. ಅದರಲ್ಲಿ ಸೂಚಿಸಿದಂತೆ ರೋಗಿಗಳೇ ಸಭ್ಯ ವಸ್ತ್ರಗಳನ್ನು ಧರಿಸಿ ಬನ್ನಿ, ಶಿಸ್ತು ಕಾಪಾಡಿ. ಬರ್ಮುಡಾ, ಶಾರ್ಟ್ಸ್​​, ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಬರಬೇಡಿ. ಇದರಿಂದ ಇತರ ರೋಗಿಗಳಿಗೆ ಮುಜುಗರವಾಗುವಂತೆ ನಡೆದುಕೊಳ್ಳಬೇಡಿ ಎಂದು ಬರೆದಿದ್ದಾರೆ.

ಇದನ್ನು ತಿಳಿಯದ ಕೆಲ ರೋಗಿಗಳು ಬರ್ಮುಡಾದಲ್ಲಿ ಬಂದು ಪೇಚಿಗೆ ಬಿದ್ದ ಘಟನೆಗಳೂ ಇವೆಯಂತೆ. ಬಳಿಕ ಅವರಿಗೆ ವೈದ್ಯರು ಮತ್ತು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿ ತಿಳಿಹೇಳಿದ್ದಾರೆ. ಇನ್ನೊಮ್ಮೆ ಇಂತಹ ಬಟ್ಟೆಯನ್ನು ಹಾಕಿಕೊಂಡು ಬರದಂತೆ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಶಿಸ್ತು ಕಾಪಾಡಿಕೊಂಡು ಬರುತ್ತಿರುವ ಕಾರಣ, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆಯಂತೆ.

ವಸ್ತ್ರದ ಶಿಷ್ಟಾಚಾರ ಏಕೆ?:ಉಡುಗೆಯು ನಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ, ಮನೆಯಲ್ಲಿ ಆರಾಮದಾಯಕ ಬಟ್ಟೆಗಳನ್ನೇ ಧರಿಸುತ್ತೇವೆ. ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವುದು ಸೂಕ್ತವಲ್ಲ. ಕೆಲವೊಮ್ಮೆ ಚಿಕ್ಕ ಬಟ್ಟೆ ಅಥವಾ ರಾತ್ರಿ ಧರಿಸುವ ಬಟ್ಟೆಗಳಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರ ಎದುರಿಸಬೇಕಾಗುತ್ತದೆ. ಆದ್ದರಿಂದ ಡಾ.ಜಿ.ಡಿ.ಮಲಾನಿ ಅವರು ಇಂಥದ್ದೊಂದು ವಿನೂತನ ಅಭಿಯಾನ ನಡೆಸುತ್ತಿದ್ದಾರೆ.

130 ದೇಗುಲಗಳಲ್ಲಿ ವಸ್ತ್ರಸಂಹಿತೆ:ಮಹಾರಾಷ್ಟ್ರದ 130 ಕ್ಕೂ ಅಧಿಕ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ದೇಗುಲಗಳ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನೂ ನಿಷೇಧಿಸಲಾಗಿದೆ. ಈ ದೇವಾಲಯಗಳ ಟ್ರಸ್ಟಿಗಳು, ಆಡಳಿತಗಾರರು, ಅರ್ಚಕರು, ವಕೀಲರು ಮತ್ತು ಕಾರ್ಯಕರ್ತರು ಇಂಥದ್ದೊಂದು ನಿರ್ಣಯ ಪಾಸು ಮಾಡಿದ್ದಾರೆ.

ಇದನ್ನೂ ಓದಿ:Dress code: ಮಹಾರಾಷ್ಟ್ರದ 135 ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ನಿರ್ಧಾರ; ಉತ್ತರ ಪ್ರದೇಶದ ಜೈನಮಂದಿರಗಳಲ್ಲಿ ನಿಯಮ ಜಾರಿ

ABOUT THE AUTHOR

...view details