ಔರಂಗಾಬಾದ್(ಮಹಾರಾಷ್ಟ್ರ):ಪತಿಯಿಂದವಿಚ್ಛೇದನ ಪಡೆದುಕೊಂಡಿರುವ ಪತ್ನಿ ಆತನಿಗೆ ಶಾಶ್ವತ ಜೀವನಾಂಶ ನೀಡುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಶ್ರೀಮತಿ ಭಾರತಿ ಡಾಂಗ್ರೆ, ನಾಂದೇಡ್ ಸಿವಿಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು.
ಪ್ರಕರಣದ ವಿವರ:ಅರ್ಜಿದಾರ ಪತ್ನಿ ಮತ್ತು ಪತಿ 1992ರಲ್ಲಿ ವಿವಾಹವಾಗಿದ್ದರು. ಬಳಿಕ ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ನಾಂದೇಡ್ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ 2015ರಲ್ಲಿ ಇಬ್ಬರಿಗೂ ವಿಚ್ಛೇದನ ನೀಡಿತ್ತು. ನಂತರ ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 24 ಮತ್ತು 25ರ ಅಡಿಯಲ್ಲಿ ತನ್ನ ಹೆಂಡತಿಯಿಂದ ಜೀವನಾಂಶ ಮತ್ತು ಜೀವನಾಧಾರ ವೆಚ್ಚ ಕೋರಿ ಗಂಡ ಅರ್ಜಿ ಸಲ್ಲಿಸಿದ್ದನು. 'ನನಗೆ ಯಾವುದೇ ರೀತಿಯ ಜೀವನಾಧಾರವಿಲ್ಲ. ಹೆಂಡತಿ ಸರ್ಕಾರಿಯಲ್ಲಿದ್ದು, ಉತ್ತಮ ಸಂಬಳ ಪಡೆದುಕೊಳ್ಳುತ್ತಿದ್ದಾಳೆ. ಒಂದು ವೇಳೆ ಗಂಡ ಉತ್ತಮ ಸ್ಥಾನದಲ್ಲಿದ್ದರೆ ಆತ ಹೆಂಡತಿಗೆ ಜೀವನಾಂಶ ನೀಡುತ್ತಿದ್ದನು' ಎಂಬ ತಿಳಿಸಿದ್ದನು.
ಈ ಅರ್ಜಿ ಪರಿಗಣಿಸಿದ ಸಿವಿಲ್ ಕೋರ್ಟ್, ಪತಿಗೆ ಶಾಶ್ವತ ಜೀವನಾಂಶ ನೀಡುವಂತೆ ಆದೇಶಿಸಿದೆ. ನಾಂದೇಡ್ ಸಿವಿಲ್ ಕೋರ್ಟ್ ನೀಡಿದ ಈ ಆದೇಶವನ್ನು ಪ್ರಶ್ನಿಸಿದ ಪತ್ನಿಯು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಳು. 'ವಿಚ್ಛೇದನ ಪಡೆದುಕೊಳ್ಳುತ್ತಿದ್ದಂತೆ ನಮ್ಮಿಬ್ಬರ ನಡುವಿನ ಸಂಬಂಧ ಮುಕ್ತಾಯಗೊಂಡಿದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 25ರ ಅಡಿ ಶಾಶ್ವತ ಜೀವನಾಂಶ, ಜೀವನಾಧಾರ ವೆಚ್ಚ ನೀಡಲು ಸಾಧ್ಯವಿಲ್ಲ' ಎಂದು ಅರ್ಜಿಯಲ್ಲಿ ವಾದಿಸಿದ್ದಳು.
ಇದನ್ನೂ ಓದಿ:'ಆರ್ಆರ್ಆರ್' ಸಿನಿಮಾ ನೋಡಿದ ಬಾಲಿವುಡ್ನ ಬಿಗ್-ಬಿ..
ಗಂಡನ ಪರ ವಾದ ಮಂಡಿಸಿರುವ ವಕೀಲ ರಾಜೇಶ್ ಮೇವಾರ್, ಹಿಂದೂ ವಿವಾಹ ಕಾಯ್ದೆ 25ರ ಅಡಿಯಲ್ಲಿ ಜೀವನಾಧಾರ ವೆಚ್ಚಗಳಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ವಾದಿಸಿದ್ದು, ನಾಂದೇಡ್ ಸಿವಿಲ್ ಕೋರ್ಟ್ ನೀಡಿರುವ ಆದೇಶ ಎತ್ತಿ ಹಿಡಿಯುವಂತೆ ಮನವಿ ಮಾಡಿದ್ದರು. ಪ್ರಕರಣದ ಸುದೀರ್ಘ ವಾದ-ಪ್ರತಿವಾದ, ದಾಖಲೆಗಳು ಹಾಗೂ ಸುಪ್ರೀಂಕೋರ್ಟ್ ನೀಡಿದ ಈ ಹಿಂದಿನ ಮಹತ್ವದ ತೀರ್ಪುಗಳನ್ನು ಆಧರಿಸಿ ಹೈಕೋರ್ಟ್, ವಿಚ್ಛೇದನದ ನಂತರ ಪತಿಗೆ ಶಾಶ್ವತ ಜೀವನಾಂಶ ಮತ್ತು ಜೀವನಾಧಾರ ನೀಡುವಂತೆ ಪತ್ನಿಗೆ ಸೂಚನೆ ನೀಡಿದೆ. ಇದರ ಜೊತೆಗೆ, ನಾಂದೇಡ್ ಸಿವಿಲ್ ಕೋರ್ಟ್ನ ಆದೇಶವನ್ನೂ ಎತ್ತಿ ಹಿಡಿಯಿತು, ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.