ನಾಸಿಕ್(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಜಾತಿ ಪಂಚಾಯಿತಿ ವ್ಯವಸ್ಥೆ ಇನ್ನೂ ಅಸ್ತಿತ್ವದಲ್ಲಿದ್ದು, ಕೆಲವು ವಿಚಿತ್ರ ತೀರ್ಪುಗಳಿಗೆ ಸಾಕ್ಷಿಯಾದ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಈಗ ಈ ಪಂಚಾಯಿತಿ ಪ್ರಕಟಿಸಿರುವ ತೀರ್ಪು ವಿಚಿತ್ರ ಹಾಗೂ ಸಂವಿಧಾನಾತ್ಮಕ ಕಾನೂನನ್ನು ಅಣಕಿಸುವಂತಿದೆ. ಹೌದು, ಪಂಚಾಯಿತಿ ಸಭೆ ಕರೆದು ಮಹಿಳೆಯ ಅನುಪಸ್ಥಿತಿಯಲ್ಲೇ ಕೇವಲ ಒಂದು ರೂಪಾಯಿ ಜೀವನೋಪಾಯ ಪರಿಹಾರ ನೀಡಿ, ಫೋನ್ ಕರೆ ಮೂಲಕವೇ ವಿಚ್ಛೇದನ ನಿರ್ಧಾರ ಪ್ರಕಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಾಸಿಕ್ನ ಸಿನ್ನಾರ್ ಎಂಬಲ್ಲಿನ ಮಹಿಳೆಗೆ ಅಹಮದ್‌ನಗರ ಜಿಲ್ಲೆಯ ಲೋನಿ ಪ್ರದೇಶದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ತಾನು ತವರು ಮನೆಯಲ್ಲೇ ಇದ್ದ ಸಂದರ್ಭದಲ್ಲಿ ತನಗೆ ಮಾಹಿತಿ ನೀಡದೆ, ವಿಚ್ಛೇದನ ನೀಡಿ ಅನ್ಯಾಯವೆಸಗಲಾಗಿದೆ. ಹೀಗಾಗಿ ತಾನು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.ಮದುವೆಯಾದ ಕೆಲ ದಿನಗಳಲ್ಲೇ ಪತಿಯ ಮನೆಯಲ್ಲಿ ಕಿರುಕುಳ ನೀಡಿದ್ದು, ಬಳಿಕ ಮಹಿಳೆಯು ತವರುಮನೆ ಸಿನ್ನಾರ್ಗೆ ಬಂದು ನೆಲೆಸಿದ್ದಳು. ಮಹಿಳೆಯು ಮನೆಗೆ ವಾಪಸಾಗದ ಕಾರಣ, ಪತಿಯ ಮನೆಯವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಆದರೆ, ಕಾನೂನು ಕ್ರಮಕ್ಕೆ ಮುಂದಾಗದ ಕುಟುಂಬವು ಪಂಚಾಯಿತಿ ಮೊರೆ ಹೋಗಿದೆ.