ಹೈದರಾಬಾದ್ :ಕಳೆದ ಕೆಲವು ದಿಗಳಿಂದ ತೆಲಂಗಾಣ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ರಾಜ್ಯದ ರಾಜಣ್ಣ ಸಿರಿಸಿಲ್ಲಾ, ಕರೀಂನಗರ, ಜಗಿತಾಲ್, ನಿಜಾಮಾಬಾದ್, ಕಾಮರೆಡ್ಡಿ, ವಾರಂಗಲ್ ಜಿಲ್ಲೆಗಳಲ್ಲಿ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ಸಿರಿಸಿಲ್ಲಾ ಪಟ್ಟಣದ ಪ್ರಗತಿನಗರ, ಹಳೆ ಬಸ್ ನಿಲ್ದಾಣ, ಸಾಯಿನಗರ, ಅಂಬಿಕಾನಗರ ಮತ್ತು ಇತರ ಕಾಲೋನಿಗಳು ಪ್ರವಾಹಕ್ಕೊಳಗಾಗಿವೆ. ಭಾರಿ ಮಳೆಯಿಂದಾಗಿ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ಪ್ರವಾಹ ರೂಪದಲ್ಲಿ ನೀರು ಹರಿಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ತೇಲಿ ಹೋದ ಗಣೇಶ ಮೂರ್ತಿ :ಸಿರಿಸಿಲ್ಲಾದಲ್ಲಿ ಮಳೆನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಮುಖ ಕಾಲೋನಿಗಳು ಮಳೆ ನೀರಿನಿಂದ ತುಂಬಿ ಹೋಗಿವೆ. ಸಂಕಷ್ಟಹರ ಗಣೇಶನಿಗೂ ಪ್ರವಾಹದ ಸಂಕಷ್ಟ ತಪ್ಪಿಲ್ಲ. ರಸ್ತೆಗಳಲ್ಲಿ ಹರಿಯುವ ಪ್ರವಾಹದ ನೀರಿನಲ್ಲಿ ಗಣೇಶನ ವಿಗ್ರಹ ಕೊಚ್ಚಿ ಹೋಗಿದೆ. ತಗ್ಗು ಪ್ರದೇಶಗಳು ಪ್ರವಾಹದಿಂದ ಮುಳುಗಿವೆ. ಹಲವಾರು ಕಾಲೋನಿಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಸ್ಪೆಷಲ್ ಕಂಟ್ರೋಲ್ ರೂಮ್ :ಸಿರಿಸಿಲ್ಲಾದ ಜಿಲ್ಲಾಧಿಕಾರಿ ಕಚೇರಿ ಪ್ರಾಂಗಣಕ್ಕೂ ಮಳೆನೀರು ನುಗ್ಗಿದೆ. ಭಾರಿ ಮಳೆ ಹಿನ್ನೆಲೆ ಸಿರಿಸಿಲ್ಲಾ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅನುರಾಗ್ ಜಯಂತಿರವರು ರಜೆ ಘೋಷಿಸಿದ್ದಾರೆ. ಅಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಸ್ತಿ ಮತ್ತು ಬೆಳೆ ನಷ್ಟದ ವಿವರಗಳಿಗಾಗಿ ಜಿಲ್ಲಾಡಳಿತ ನೀಡಿರುವ 9398684240 ನಂಬರ್ ಅನ್ನು ಸಂಪರ್ಕಿಸಬಹುದು. ಅಧಿಕಾರಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದು, ಪಟ್ಟಣದಲ್ಲಿ ವಿಶೇಷ ಸ್ಪೆಷಲ್ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಲಾಗಿದೆ.
ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಕೆಸಿಆರ್, ಕೆಟಿಆರ್ :ಸಿಎಂ ಕೆಸಿಆರ್ ಮತ್ತು ಸಚಿವ ಕೆ ಟಿ ರಾಮರಾವ್ ಸಿರಿಸಿಲ್ಲಾದ ಪ್ರವಾಹ ಪರಿಸ್ಥಿತಿ ಬಗ್ಗೆ ಅವಲೋಕಿಸಿದ್ದಾರೆ. ಸಚಿವ ಕೆಟಿಆರ್ ಆದೇಶದ ಮೇರೆಗೆ ಎರಡು ಡಿಆರ್ಎಫ್ ತಂಡಗಳು ಸಿರಿಸಿಲ್ಲಾಗೆ ತೆರಳಿವೆ. ದೋಣಿಗಳು, ಪ್ರವಾಹ ಪರಿಹಾರ ಸಾಧನಗಳೊಂದಿಗೆ ತೆರಳಿದ್ದು, ಪ್ರವಾಹ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಲಾಗುವುದು.
ಕಾರಿಗೆ ಹಗ್ಗ ಕಟ್ಟಿದ ವಿಡಿಯೋ ವೈರಲ್ :ಸದ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೋರ್ವ ತನ್ನ ಕಾರನ್ನು ಹಗ್ಗದಿಂದ ಕಟ್ಟುತ್ತಿದ್ದಾನೆ. ಕಾರಣ ಕಳ್ಳಲು ಕದಿಯಬಾರದು ಅಂತಾ ಅಲ್ಲ, ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು ಅಂತಾ. ತೆಲಂಗಾಣದಲ್ಲಿ ಪ್ರವಾಹದ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಸಿರಿಸಿಲ್ಲಾದ ಬೀದಿಗಳು ನದಿಗಳಂತಾಗಿವೆ.