ಡೆಹ್ರಾಡೂನ್(ಉತ್ತರಾಖಂಡ್): ಜೋಶಿಮಠದಲ್ಲಿ ಶಿಥಿಲ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಗುರುವಾರ ಶುರುವಾಗಿದೆ. ಮಲಾರಿ ಮೌಂಟ್ ವ್ಯೂ ಎರಡು ಹೊಟೇಲ್ಗಳಲ್ಲಿ ಬಿರುಕುಗೊಂಡಿದ್ದರಿಂದ ಹೊಟೇಲ್ ಮಾಲೀಕರು ಹಾಗೂ ಜಿಲ್ಲಾಡಳಿತದಿಂದ ನಡೆದ ಸಭೆಯಲ್ಲಿ ಪರಿಹಾರದ ಬಗ್ಗೆ ತೀರ್ಮಾನದ ಬಳಿಕವೇ ನೆಲಸಮಗೊಳಿಸುವ ಪ್ರಕ್ರಿಯೆ ಆರಂಭಗೊಂಡಿತು.
ಎರಡು ದಿನಗಳಿಂದ ಕಟ್ಟಡಗಳ ಧ್ವಂಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಸಂತ್ರಸ್ತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುವುದಾಗಿ ಸ್ಥಳೀಯ ಜನರಿಗೆ ಸರ್ಕಾರ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸುವ ಮೂಲಕ ಧ್ವಂಸ ಪ್ರಕ್ರಿಯೆ ಆರಂಭಿಸಲಾಯಿತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಜೋಶಿಮಠದಲ್ಲಿ ಬೀಡು ಬಿಟ್ಟಿದ್ದು, ಜನವರಿ 11 ರಂದು ಬೆಳಗ್ಗೆ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸಂತ್ರಸ್ತರಿಗೆ ನೀಡುತ್ತಿರುವ ಮಧ್ಯಂತರ ನೆರವಿನ ಬಗ್ಗೆ ಸಂಪೂರ್ಣ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು.
ಐಎಎಸ್ ಅಧಿಕಾರಿಗಳಿಂದ ಒಂದು ದಿನದ ವೇತನ: ಜೋಶಿಮಠ ಸಂತ್ರಸ್ತರ ನೆರವಿಗಾಗಿ ಉತ್ತರಾಖಂಡದ ಐಎಎಸ್ ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಗಮನಾರ್ಹವೆಂದರೆ ಜೋಶಿಮಠ ಪದೇ ಪದೆ ಭೂಕುಸಿತದಿಂದ ಅಪಾಯ ಎದುರಿಸುತ್ತಿದೆ. ನೂರಾರು ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. 700ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಜೋಶಿಮಠ ಕುಸಿತ ಇಸ್ರೋ ಉಪಗ್ರಹ ಚಿತ್ರ:ಜೋಶಿಮಠದಲ್ಲಿ ಭೂಕುಸಿತದ ನಂತರ ಮನೆ ರಸ್ತೆಗಳಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ದೇಶದ ಎಲ್ಲ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದು, ಮೊದಲ ಬಾರಿಗೆ ಕೆಲವು ಉಪಗ್ರಹ ಚಿತ್ರಗಳನ್ನು ಇಸ್ರೋ ಅಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ದಿಂದ ಬಿಡುಗಡೆ ಮಾಡಿದೆ. ಇಸ್ರೋ ಬಿಡುಗಡೆ ಮಾಡಿರುವ ಜೋಶಿಮಠದ ಉಪಗ್ರಹ ಚಿತ್ರಗಳಲ್ಲಿ ಜೋಶಿಮಠದ ಯಾವ ಭಾಗ ಕುಸಿಯಲಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಎಲ್ಲಾ ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ ಎಂದು ಹೇಳಿದೆ.