ಫತೇಪುರ್(ಉತ್ತರ ಪ್ರದೇಶ) :ಭಕ್ತರೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವ ಭವಾನಿ ದೇವಿಗೆ ಅರ್ಪಿಸಿದ ಘಟನೆ ಮಂಗಳವಾರ ನಡೆದಿದೆ. ಹೌದು, ನವರಾತ್ರಿಯ ಸಪ್ತಮಿಯ ಸಂದರ್ಭದಲ್ಲಿ, ಜಿಲ್ಲೆಯ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಗೌಲಿ ಗ್ರಾಮದ ಬಳಿಯ ಶಿವ ಭವಾನಿ ಮಾತಾ ದೇವಸ್ಥಾನದಲ್ಲಿ ಭಕ್ತರೊಬ್ಬರು ತಮ್ಮ ನಾಲಿಗೆಯನ್ನು ಕತ್ತರಿಸಿ ಅರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಭಕ್ತನು ತನ್ನ ನಾಲಿಗೆಯನ್ನು ಅರ್ಪಿಸಿದ ತಕ್ಷಣ ರಕ್ತದಲ್ಲಿ ತೊಯ್ದು ಹೋಗಿದ್ದಾನೆ. ಈ ಘಟನೆಯಿಂದ ದೇವಸ್ಥಾನದಲ್ಲಿ ಭಾರೀ ಸಂಚಲನ ಉಂಟಾಯಿತು. ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರಲಾರಂಭಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ನಾಲಿಗೆ ಕತ್ತರಿಸಿಕೊಂಡಿದ್ದ ಭಕ್ತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಭಕ್ತನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪೊಲೀಸರು ಹೇಳಿದ್ದೇನು?:ಫತೇಪುರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಈ ದೇವಿ ದೇವಸ್ಥಾನಕ್ಕೆ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಸಮಯದಲ್ಲಿ, ನಂಬಿಕೆಯ ವಿವಿಧ ರೂಪಗಳು ಕಂಡುಬರುತ್ತವೆ. ಕಲ್ಯಾಣಪುರ ಜಿಲ್ಲೆಯ ಫತೇಪುರದ ಗುಗೌಲಿ ಗ್ರಾಮದ ನಿವಾಸಿ ಬಾಬುರಾಮ್ ಪಾಸ್ವಾನ್ (65 ವರ್ಷ) ಎಂಬ ಭಕ್ತ ತಮ್ಮ ನಾಲಿಗೆಯನ್ನು ಅರ್ಧ ಕತ್ತರಿಸಿ, ಗುಗೌಲಿ ಗ್ರಾಮದ ಬಳಿಯ ದೇವಸ್ಥಾನದಲ್ಲಿ ಶಿವ ಭವಾನಿ ಮಾತಾಗೆ ಅರ್ಪಿಸಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಕಲ್ಯಾಣ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಯಾದವ್ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಈ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತದೆ. ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.