ವಾರಾಣಸಿ (ಉತ್ತರ ಪ್ರದೇಶ):ಡಿಜಿಟಲೀಕರಣವು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಅರ್ಥಪೂರ್ಣ ನೀತಿ ನಿರೂಪಣೆ, ಸಂಪನ್ಮೂಲಗಳ ಸಮರ್ಥ ಹಂಚಿಕೆ, ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಡಿಜಿಟಲೀಕರಣ ನಿರ್ಣಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಿ20 ಶೃಂಗಸಭೆಗೆ ಭಾರತ ಅಧ್ಯಕ್ಷತೆ ವಹಿಸಿದ್ದು, ಈ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ನಡೆಯುತ್ತಿರುವ 3 ದಿನಗಳ ಅಭಿವೃದ್ಧಿ ಸಭೆಯಲ್ಲಿ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ತಂತ್ರಜ್ಞಾನ ನಿರ್ಣಾಯಕ ಘಟ್ಟವಾಗಿದೆ. ಭಾರತದಲ್ಲಿ ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ, ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಜಿ20 ರಾಷ್ಟ್ರಗಳ ಮುಖ್ಯಸ್ಥರನ್ನು ವಾರಾಣಸಿಗೆ ಸ್ವಾಗತಿಸಿದ ಮೋದಿ, ಇದು ಪ್ರಜಾಪ್ರಭುತ್ವವೆಂಬ ತಾಯಿಯ ಅತ್ಯಂತ ಹಳೆಯ ಜೀವಂತ ನಗರವಾಗಿದೆ ಎಂದು ಹೇಳಿದರು. ಕಾಶಿಯ ಮಹತ್ವದ ಬಗ್ಗೆ ಅರುಹಿದ ಅವರು, ಕಾಶಿ ಕ್ಷೇತ್ರ ಶತಮಾನಗಳಿಂದಲೂ ಜ್ಞಾನ, ಚರ್ಚೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಭಾರತದ ವೈವಿಧ್ಯಮಯ ಪರಂಪರೆಯ ಸಾರವನ್ನು ಹೊಂದಿದೆ ಎಂದು ಬಣ್ಣಿಸಿದರು.
ಸುಸ್ಥಿರ ಅಭಿವೃದ್ಧಿ:ಜಿ 20 ಅಭಿವೃದ್ಧಿ ಕಾರ್ಯಸೂಚಿಯು ಕಾಶಿಯನ್ನೂ ತಲುಪಿದೆ ಎಂಬುದು ಸಂತೋಷದ ವಿಷಯವಾಗಿದೆ. ಜಾಗತಿಕ ಅಭಿವೃದ್ಧಿಯು ಒಂದು ಪ್ರಮುಖ ವಿಷಯವಾಗಿದೆ. ಸುಸ್ಥಿರ ಅಭಿವೃದ್ಧಿ ಹಿಂದೆ ಬೀಳದಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಎಂದು ನಾನು ಬಲವಾಗಿ ನಂಬುತ್ತೇನೆ. ಇದರಿಂದ ಯಾರೂ ಹಿಂದೆ ಉಳಿದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ" ಎಂದು ಪ್ರಧಾನಿ ಹೇಳಿದರು.