ಕರ್ನಾಟಕ

karnataka

ETV Bharat / bharat

ಪೆಗಾಸಸ್ ಬೇಹುಗಾರಿಕೆ : ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಹೈಜಾಕ್, ದೇಶದ್ರೋಹ - ಕೈ ನಾಯಕರು ಕಿಡಿ - ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು

ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲಾಗಿದೆ. ನಾವು ದೀರ್ಘಕಾಲ ಪ್ರತಿಪಾದಿಸಿದ್ದನ್ನು ಅಂತಾರಾಷ್ಟ್ರೀಯ ಪತ್ರಿಕೆ ಈಗ ದೃಢಪಡಿಸಿದೆ ಎಂದು ಪೆಗಾಸಸ್ ಬೇಹುಗಾರಿಕೆ ಸಂಬಂಧ 'ದಿ ನ್ಯೂಯಾರ್ಕ್ ಟೈಮ್ಸ್' ನಲ್ಲಿ ಪ್ರಕಟವಾದ ವರದಿಗೆ ರಾಷ್ಟ್ರೀಯ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದಾರೆ..

pegasus
ಪೆಗಾಸಸ್ ಬೇಹುಗಾರಿಕೆ

By

Published : Jan 29, 2022, 4:51 PM IST

ನವದೆಹಲಿ :ಪೆಗಾಸಸ್ ಬೇಹುಗಾರಿಕೆ ಸಂಬಂಧ ಅಮೆರಿಕದ ಸುದ್ದಿ ಪತ್ರಿಕೆ 'ದಿ ನ್ಯೂಯಾರ್ಕ್ ಟೈಮ್ಸ್' ವರದಿಯಲ್ಲಿ ಮಹತ್ವದ ವಿಚಾರ ಹೊರಬಿದ್ದ ಬಳಿಕ ಕಾಂಗ್ರೆಸ್​ ನಾಯಕರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪೋಸ್ಟ್​ ಶೇರ್ ಮಾಡಿರುವ ರಾಹುಲ್​ ಗಾಂಧಿ, "ನಮ್ಮ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿತು.

ಸರ್ಕಾರದ ಪದಾಧಿಕಾರಿಗಳು, ವಿರೋಧ ಪಕ್ಷದ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗ ಎಲ್ಲರೂ ಈ ಫೋನ್ ಕದ್ದಾಲಿಕೆಗೆ ಗುರಿಯಾಗಿದ್ದರು. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ" ಎಂದು ಟ್ವೀಟ್​ ಮಾಡಿದ್ದಾರೆ.

"ಮೋದಿ ಸರ್ಕಾರವು ಭಾರತದ ಶತ್ರುಗಳಂತೆ ವರ್ತಿಸಿದ್ದು, ಭಾರತೀಯ ನಾಗರಿಕರ ವಿರುದ್ಧ ಯುದ್ಧ ಅಸ್ತ್ರವನ್ನು ಏಕೆ ಬಳಸಿತು? ಪೆಗಾಸಸ್ ಬಳಸಿ ಅಕ್ರಮವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ನ್ಯಾಯ ಉಳಿಯುವಂತೆ ನಾವು ಭರವಸೆ ನೀಡುತ್ತೇವೆ" ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಹೈಜಾಕ್ :ಈ ಬಗ್ಗೆ ಪತ್ರಿಕಾ ಪ್ರಕರಣೆ ಹೊರಡಿಸಿರುವ ರಾಷ್ಟ್ರೀಯ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲಾಗಿದೆ. ನಾವು ದೀರ್ಘಕಾಲ ಪ್ರತಿಪಾದಿಸಿದ್ದನ್ನು ಅಂತಾರಾಷ್ಟ್ರೀಯ ಪತ್ರಿಕೆ ಈಗ ದೃಢಪಡಿಸಿದೆ.

ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ಅಕ್ರಮ ಮತ್ತು ಅಸಾಂವಿಧಾನಿಕ ಸ್ನೂಪಿಂಗ್ ಮತ್ತು ಬೇಹುಗಾರಿಕೆಯಲ್ಲಿ ಸ್ವತಃ ಪ್ರಧಾನಿ ಶ್ರೀ ಮೋದಿ ಅವರೇ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BIG SHOCK: 2017ರಲ್ಲಿ ಇಸ್ರೇಲ್‌ ಜತೆಗಿನ ಒಪ್ಪಂದದ ಭಾಗವಾಗಿ ಭಾರತ ಪೆಗಾಸಸ್ ಖರೀದಿಸಿದೆ : ನ್ಯೂಯಾರ್ಕ್ ಟೈಮ್ಸ್ ವರದಿ

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಇತರ ಗಣ್ಯ ವ್ಯಕ್ತಿಗಳ ಮೇಲೆ ಕಣ್ಣಿಡಲು ಕೆಲವು ಸರ್ಕಾರಗಳು ತನ್ನ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿ ಬೇಹುಗಾರಿಕೆ ನಡೆಸಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಭಾರತದಲ್ಲಿ ಇದು ಕಳೆದ ವರ್ಷ ಭಾರಿ ವಿವಾದವು ಸ್ಫೋಟಗೊಳ್ಳಲು ಕಾರಣವಾಗಿತ್ತು. ಪೆಗಾಸಸ್ ಬೇಹುಗಾರಿಕೆ ಕೇಸ್​ ತನಿಖೆ ನಡೆಸಲು ಸುಪ್ರೀಂಕೋರ್ಟ್ ಮೂವರು ಪರಿಣತರ ಸ್ವತಂತ್ರ ಸಮಿತಿ ರಚನೆ ಮಾಡಿತ್ತು.

ಸುರ್ಜೇವಾಲಾ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲೇನಿದೆ?:ಮೋದಿ ಸರ್ಕಾರದ ಈ ನಡೆ ಪ್ರಜಾಪ್ರಭುತ್ವದ ಅಪಹರಣ, ಇದು ದೇಶದ್ರೋಹ ಎಂದಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಐದು ವಿಷಯಗಳು ಸ್ಪಷ್ಟವಾಗಿದೆ ಎಂದು ಪಟ್ಟಿ ಮಾಡಿದ್ದಾರೆ.

1.ಸಾಫ್ಟ್‌ವೇರ್ ಖರೀದಿ : ಮೋದಿ ಸರ್ಕಾರವು 2017ರಲ್ಲಿ ಇಸ್ರೇಲಿ ಪೆಗಾಸಸ್ ಸ್ಪೈವೇರ್ ಮತ್ತು ಇತರ ಮಿಲಿಟರಿ ತಂತ್ರಜ್ಞಾನವನ್ನು ಖರೀದಿಸಿತು. ಇದು USD 2 ಬಿಲಿಯನ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಒಪ್ಪಂದದ ಕೇಂದ್ರಬಿಂದುವಾಗಿದೆ.

2.ಭದ್ರತಾ ವೈಶಿಷ್ಟ್ಯಗಳ ಹ್ಯಾಕ್ : ಈ ಸ್ಪೈವೇರ್ ವಾಟ್ಸ್‌ಆ್ಯಪ್​ ಮಾತ್ರವಲ್ಲದೇ ಮೊಬೈಲ್ ಫೋನ್​ನ ಎಲ್ಲಾ ಚಟುವಟಿಕೆಗಳನ್ನು ಸೆರೆ ಹಿಡಿಯುತ್ತದೆ. ಸೆಲ್‌ಫೋನ್‌ಗಳ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ತಿರುಗಿಸುತ್ತದೆ. ಪಾಸ್‌ವರ್ಡ್‌ಗಳು ಸೇರಿದಂತೆ ಫೋನ್‌ನ ಎಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಹ್ಯಾಕ್ ಮಾಡುತ್ತದೆ. ಸಂಪರ್ಕ ಪಟ್ಟಿಗಳು, ಕ್ಯಾಲೆಂಡರ್ ಈವೆಂಟ್‌ಗಳು, ಸಂದೇಶಗಳನ್ನ ಪಡೆಯುತ್ತದೆ ಮತ್ತು ಲೈವ್‌ ಧ್ವನಿ ಕರೆಗಳನ್ನು ಆಲಿಸುತ್ತದೆ.

3. ಸಂಸತ್ತಿಗೆ ಮೋಸ : ಮೋದಿ ಸರ್ಕಾರ ಸಂಸತ್ತಿಗೆ ಮೋಸ ಮಾಡಿ ವಂಚಿಸಿದೆ. ಬೇಹುಗಾರಿಕೆಗೆ ಒಳಗಾಗಿದ್ದರೂ ಸ್ವತಃ ಐಟಿ ಸಚಿವ ಅಶ್ವಿನಿ ವೈಷ್ಣವ್ ಪೆಗಾಸಸ್ ವರದಿಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿದ್ದಾರೆ. ಗೃಹ ಸಚಿವರು ಮತ್ತು ಗೃಹ ಸಚಿವಾಲಯವು ಭಾರತದ ಜನರನ್ನು ಮೋಸಗೊಳಿಸಿದ್ದಾರೆ. ರಕ್ಷಣಾ ಸಚಿವರು ಮತ್ತು ರಕ್ಷಣಾ ಸಚಿವಾಲಯವು ಎನ್‌ಎಸ್‌ಒನಿಂದ ಪೆಗಾಸಸ್ ಸ್ಪೈವೇರ್ ಖರೀದಿ ಮಾಡಿರುವುದನ್ನು ಒಪ್ಪಿಕೊಳ್ಳದೇ ಸಂಸತ್ತು ಮತ್ತು ಜನರನ್ನು ದಾರಿ ತಪ್ಪಿಸಿದೆ.

4. ಸುಪ್ರೀಂಕೋರ್ಟ್‌ ಅನ್ನೇ ದಾರಿ ತಪ್ಪಿಸಿದ ಕೇಂದ್ರ :ಸಾಫ್ಟ್‌ವೇರ್ ಖರೀದಿ ಮತ್ತು ಬಳಕೆಯ ಬಗ್ಗೆ ನೇರವಾಗಿ ಪ್ರಶ್ನಿಸಿದ ಸುಪ್ರೀಂಕೋರ್ಟ್‌ಗೆ ಮೋದಿ ಸರ್ಕಾರ ದಾರಿ ತಪ್ಪಿಸಿತು. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿಸ್ಸಂದಿಗ್ಧವಾಗಿ ನಿರಾಕರಿಸಿದೆ.

5. ಪ್ರಚಾರದ ತಂತ್ರ : ಪೆಗಾಸಸ್ ವರದಿ ಸುಳ್ಳು ಎಂದು ಕಟ್ಟಿದ ಕಥೆಯನ್ನೇ ಸಾರ್ವಜನಿಕರನ್ನು ಮೋಸಗೊಳಿಸಲು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಗರು ಪ್ರಚಾರದ ತಂತ್ರವಾಗಿ ರೂಪಿಸಿಕೊಂಡಿದ್ದಾರೆ. ಭಾರತವು ಕೋವಿಡ್ ವ್ಯಾಕ್ಸಿನೇಷನ್​​ ನಿರ್ವಹಣೆಗೆ ಹೊಟ್ಟೆ ಕಿಚ್ಚಿನಿಂದ ಹೀಗೆಲ್ಲಾ ವರದಿ ಮಾಡಲಾಗುತ್ತಿದೆ ಎಂದು ಸಂಸದ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಸುರ್ಜೇವಾಲಾ ಹೇಳಿದಂತೆ ಪೆಗಾಸಸ್ ಸ್ಪೈವೇರ್​ಗೆ ಒಳಗಾದ ರಾಜಕಾರಣಿಗಳು:

  • ರಾಹುಲ್ ಗಾಂಧಿ ಮತ್ತು ಅವರ ಸಿಬ್ಬಂದಿ
  • ಮಾಜಿ ಪ್ರಧಾನಿ ದೇವೇಗೌಡ
  • ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ
  • ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೇ ಸಿಂಧಿಯಾ
  • ಸಂಸದ ಮತ್ತು ಶ್ರೀಮತಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ
  • ಬಿಜೆಪಿ ಕ್ಯಾಬಿನೆಟ್ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಅವರ ಪತ್ನಿ ಮತ್ತು ಸಿಬ್ಬಂದಿ
  • ಪ್ರಸ್ತುತ ಐಟಿ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಅವರ ಪತ್ನಿ
  • ಕೇಂದ್ರ ಸಚಿವೆ ಸ್ಮೃತಿ ಇರಾನಿ
  • ವಿಹೆಚ್‌ಪಿ ಮಾಜಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ

ಬೇಹುಗಾರಿಕೆಗೆ ಒಳಗಾದ ಇತರ ಗಣ್ಯರು

  • ಸುಪ್ರೀಂಕೋರ್ಟ್ ನ್ಯಾಯಾಧೀಶರು
  • ಭಾರತದ ಚುನಾವಣಾ ಆಯೋಗ
  • ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು
  • ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ, ಅವರ ಪತ್ನಿ ಮತ್ತು ಕುಟುಂಬ
  • ಬಿಎಸ್ಎಫ್ ಮುಖ್ಯಸ್ಥ ಕೆ ಕೆ ಶರ್ಮಾ
  • ಬಿಎಸ್ಐ ಐಜಿ ಜಗದೀಶ್ ಮೈತಾನಿ
  • RAW ಅಧಿಕಾರಿ ಜಿತೇಂದರ್ ಕುಮಾರ್ ಓಜಾ ಮತ್ತು ಅವರ ಪತ್ನಿ
  • ಭಾರತೀಯ ಸೇನಾ ಅಧಿಕಾರಿಗಳಾದ- ಕರ್ನಲ್ ಮುಕುಲ್ ದೇವ್ ಮತ್ತು ಕರ್ನಲ್ ಅಮಿತ್ ಕುಮಾರ್
  • ದಿ ಹಿಂದೂ, ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ದಿ ಮಿಂಟ್, ದಿ ವೈರ್, ಎಕನಾಮಿಕ್ & ಪೊಲಿಟಿಕಲ್ ವೀಕ್ಲಿ,ದಿ ಟ್ರಿಬ್ಯೂನ್, ಔಟ್‌ಲುಕ್ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details