ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾದ ನಂತರ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದಂತೆ ಇಂದಿನಿಂದ ಷರತ್ತುಗಳೊಂದಿಗೆ ಕೆಲ ಸೇವೆಗಳು ಪುನಾರಂಭಗೊಂಡಿವೆ.
ಕಠಿಣ ಲಾಕ್ಡೌನ್ ವಿಧಿಸಿ ಭೀಕರ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿಯಾಗಿದೆ. ಲಾಕ್ಡೌನ್ ವೇಳೆಯಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್, ಬೆಡ್ಗಳು, ವೆಂಟಿಲೇಟರ್ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲಾಗಿತ್ತು. ಇದರ ಪರಿಣಾಮ ಕೋವಿಡ್ ಸಾವು-ನೋವಿನ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿತ್ತು. ಇದೀಗ ಕಳೆದ 24 ಗಂಟೆಗಳಲ್ಲಿ ಕೇವಲ 400 ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್ ಶೇ. 0.5ಕ್ಕೆ ಇಳಿಕೆಯಾಗಿದೆ.
ದೆಹಲಿಯಲ್ಲಿ ಷರತ್ತುಗಳೊಂದಿಗೆ ಪುನಾರಂಭವಾದ ಕೆಲಸ-ಕಾರ್ಯಗಳು ಇದನ್ನೂ ಓದಿ: ಕೋವಿಡ್ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ!
ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಕೇಜ್ರಿವಾಲ್, ಸೋಮವಾರದಿಂದ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಇದಕ್ಕೂ ಮುನ್ನ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಿದವರ ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಪರವಾನಗಿ ಹೊಂದಿರುವ ಬಾರ್-ವೈನ್ ಶಾಪ್ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ದಿನಗೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಖಾನೆಗಳನ್ನು ತೆರೆಯಲು ಅನುಮತಿಸಿತ್ತು. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಕೆಲಸ ಆರಂಭಿಸಿದ್ದಾರೆ.
ಯಾವ್ಯಾವುದು ಅನ್ಲಾಕ್?
- ಎಲ್ಲಾ ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟು, ಮಾಲ್‌ಗಳಲ್ಲಿನ ಶಾಪ್ಗಳು, ಮಾರುಕಟ್ಟೆಗಳು, ಮಾರ್ಕೆಟ್ ಕಾಂಪ್ಲೆಕ್ಸ್ಗಳು ಸಮಯದ ನಿರ್ಬಂಧಗಳೊಂದಿಗೆ ತೆರೆಯಲ್ಪಡುತ್ತವೆ.
- ಮೇ 10 ರಿಂದ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೋ ಸೇವೆ ಶೇ,.50 ರಷ್ಟು ಸಾಮರ್ಥ್ಯದೊಂದಿಗೆ ಪುನರಾರಂಭಿಸಲಿದೆ.
- ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಖಾಸಗಿ ಕಚೇರಿಗಳಿಗೆ ಅವಕಾಶ
- ಸರ್ಕಾರಿ ಕಚೇರಿಗಳಲ್ಲಿ ಶೇ.100ರಷ್ಟು ಗ್ರೂಪ್ -A ಸಿಬ್ಬಂದಿ ಹಾಗೂ ಶೇ.50ರಷ್ಟು ಗ್ರೂಪ್ -B ಸಿಬ್ಬಂದಿ ಕೆಲಸ ಮಾಡಬಹುದು
- ಆನ್ಲೈನ್ ಮದ್ಯ ಸರಬರಾಜು
- ಕಾರ್ಖಾನೆಗಳಲ್ಲಿ ಕೆಲಸ, ನಿರ್ಮಾಣ ಕಾಮಗಾರಿ ಪುನಾರಂಭ
ಯಾವುದಕ್ಕೆಲ್ಲಾ ಲಾಕ್?
ಇನ್ನು ಚಿತ್ರಮಂದಿರಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಕ್ಷೌರದಂಗಡಿಗಳು, ಬ್ಯೂಟಿ ಪಾರ್ಲರ್‌ಗಳು ತೆರೆಯುವಂತಿಲ್ಲ ಹಾಗೂ ಮನೋರಂಜನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಸುವಂತಿಲ್ಲ ಎಂದು ದೆಹಲಿ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.