ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ವಿಪರೀತ ಚಳಿಯ ತಾಪಮಾನ ಮುಂದುವರೆದಿದ್ದು, ಹಲವೆಡೆ ಕನಿಷ್ಠ ತಾಪ ದಾಖಲಾಗಿದೆ. ಇಂದು (ಶುಕ್ರವಾರ) ಬೆಳಿಗ್ಗೆ 3.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಥರಗುಟ್ಟುವ ಚಳಿಯಿಂದ ನಗರದಲ್ಲಿ ದಟ್ಟ ಮಂಜು ಕವಿದಿದ್ದು, ಗೋಚರತೆ ಕ್ಷೀಣಿಸಿದೆ.
ಮಂಜು ಮುಸುಕಿದ ವಾತಾವರಣದಿಂದಾಗಿ ವಿಮಾನ ಮತ್ತು ರೈಲು ಸಂಚಾರಗಳು ವಿಳಂಬವಾಗಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನ ವಾತಾವರಣದಿಂದ ಶೂನ್ಯ ಗೋಚರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರ ವಿಳಂಬ ಕುರಿತು ಪ್ರಯಾಣಿಕರಿಗೆ ತಿಳಿಸಲಾಗಿದೆ. ಸಫ್ತರ್ಜಂಗ್ ವಿಮಾನ ನಿಲ್ದಾಣದಲ್ಲೂ ಗೋಚರತೆ 200 ಮೀಟರ್ ಇದೆ ಎಂದು ವರದಿಯಾಗಿದೆ.
23 ರೈಲುಗಳ ಸಂಚಾರ ವಿಳಂಬವಾಗಿದೆ. ಈ ವಿಳಂಬದ ಅವಧಿ 6 ಗಂಟೆಯಾಗಿದೆ. ಪ್ರತಿಕೂಲ ಹವಾಮಾನವು ದೆಹಲಿಯಲ್ಲಿ ಮಾತ್ರವಲ್ಲದೇ ರಾಜ್ಯದೆಲ್ಲಡೆ ಉಂಟಾಗಿದ್ದು, ಸಂಚಾರದಲ್ಲಿ ವ್ಯತ್ಯಯವಾಗಿದೆ.
ದೆಹಲಿಯಲ್ಲಿ ಇಂದು ಗರಿಷ್ಠ ಎಂದರೆ 18 ಡಿಗ್ರಿ ತಾಪಮಾನ ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಆನಂದ್ ವಿಹಾರ್, ದ್ವಾರಕಾ ಸೆಕ್ಟರ್ 8ರಲ್ಲಿ ಗಾಳಿಯ ಗುಣಮಟ್ಟ ಕಳಪೆ ವರ್ಗದಲ್ಲಿದೆ. ಇಲ್ಲಿ ಪಿಎಂ2.5 ಮಟ್ಟ ದಾಖಲಾಗಿದೆ. ದೆಹಲಿ ಹೊರತಾಗಿ ಉತ್ತರ, ಪೂರ್ವ ಮತ್ತು ಈಶಾನ್ಯ ಭಾರತದಲ್ಲೂ ಭಾರಿ ಚಳಿ ಇದೆ. ದಟ್ಟ ಮಂಜಿನಿಂದ ಅನೇಕ ಸ್ಥಳದಲ್ಲಿ ಶೂನ್ಯ ಮೀಟರ್ ಗೋಚರತೆ ಕಂಡುಬಂದಿದೆ.
ಉತ್ತರ ಪ್ರದೇಶ ವರದಿ:ಉತ್ತರ ಪ್ರದೇಶದಲ್ಲೂ ದಟ್ಟ ಮಂಜು ಮತ್ತು ತಣ್ಣನೆಯ ಗಾಳಿ ಬೀಸುತ್ತಿದೆ. ಲಕ್ನೋ ಸೇರಿದಂತೆ ಹಲವೆಡೆ ಗುರುವಾರ ರಾತ್ರಿ ತೀವ್ರ ಚಳಿ ದಾಖಲಾಗಿದೆ. ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಬೆಳಿಗ್ಗೆ ದಟ್ಟ ಮಂಜಿನ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಉತ್ತರ ಗುಡ್ಡಗಾಡು ಪ್ರದೇಶಗಳಿಂದ ಬರುವ ವಾಯುವ್ಯ ಹಿಮಾವೃತ ಮಾರುತಗಳಿಂದ ಚಳಿ ಹೆಚ್ಚಿದ್ದು, ಭಾನುವಾರದವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ.
ಆಗ್ರಾದಲ್ಲೂ ಶೂನ್ಯ ಗೋಚರತೆ ಇದೆ. ಲಕ್ನೋ, ರಾಯ್ ಬರೇಲಿಯಲ್ಲಿ ಗೋಚರತೆ 25 ಮೀಟರ್ ಇದ್ದರೆ, ವಾರಣಾಸಿಯಲ್ಲಿ 50 ಮೀಟರ್ ದಾಖಲಾಗಿದೆ. ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ತ್ರಿಪುರಾ, ಬಿಹಾರದಲ್ಲೂ ಚಳಿ ತಾಪಮಾನ ಮುಂದುವರೆದಿದೆ. ಉತ್ತರ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯ ಪ್ರದೇಶದಲ್ಲಿ ಸಾಧಾರಣ ಮಂಜಿನ ವಾತಾವರಣವಿದೆ. ರಾಜಸ್ಥಾನದ ಗಂಗಾನಗರ್ ಮತ್ತು ಪಶ್ಚಿಮ ಮಧ್ಯ ಪ್ರದೇಶದ ಭೋಪಾನ್ನಲ್ಲಿ ಗೋಚರತೆ 200 ಮೀಟರ್ ಇದೆ. (ಐಎಎನ್ಎಸ್, ಪಿಟಿಐ)
ಇದನ್ನೂ ಓದಿ:ರಾಷ್ಟ್ರೀಯ ಯುವ ದಿನ: ಸ್ವಾಮಿ ವಿವೇಕಾನಂದರ ಪರಂಪರೆಯ ಸ್ಮರಣೆ