ನವದೆಹಲಿ:ದೆಹಲಿ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 13 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಲುಕ್ ಔಟ್ ಸುತ್ತೋಲೆಯು 'ಒಬ್ಬ ವ್ಯಕ್ತಿಯನ್ನು ದೇಶವನ್ನು ತೊರೆಯುವುದನ್ನು ತಡೆಯುತ್ತದೆ ಮತ್ತು ಷರತ್ತನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ವ್ಯಕ್ತಿಯನ್ನು ಬಂಧಿಸಬಹುದು'.
ಏನಿದು ಅಬಕಾರಿ ಹಗರಣ?:ದೆಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೇ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.
ಸಿಬಿಐ ತನಿಖೆಗೆ ಸಚಿವ ಮನೀಶ್ ಸಿಸೋಡಿಯಾ ಕೂಡ ಆಗ್ರಹಿಸಿದ್ದರು. ಮದ್ಯದ ಲೈಸೆನ್ಸ್ ಪಡೆದುಕೊಂಡವರಿಗೆ ಟೆಂಡರ್ ನಂತರ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಟೆಂಡರ್ ಪಡೆದವರಿಗೆ ಕೋವಿಡ್ ಕಾರಣ ನೀಡಿ 144.36 ಕೋಟಿ ರೂ. ಶುಲ್ಕ ವಿನಾಯಿತಿ ಕೊಡಲಾಗಿದೆ. ಕಡಿಮೆ ಬಿಡ್ ಮಾಡಿದ್ದ ಒಬ್ಬರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಎನ್‌ಒಸಿ ಸಿಕ್ಕಿಲ್ಲ ಎಂಬ ಕಾರಣದಿಂದ ಅವರು ನೀಡಿದ್ದ 30 ಕೋಟಿ ರೂ.ಗಳನ್ನು ಮರಳಿಸಲಾಗಿದೆ. ಆದರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬ ಆರೋಪವಿದೆ.
ಬಿಜೆಪಿ ವಿರುದ್ಧ ಸಿಸೋಡಿಯಾ ವಾಗ್ದಾಳಿ: ದೆಹಲಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಎಪಿ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿ ನಿಯಂತ್ರಣ ಹೇರಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. "ಅವರ ಸಮಸ್ಯೆ ಭ್ರಷ್ಟಾಚಾರವಲ್ಲ, ಅರವಿಂದ್ ಕೇಜ್ರಿವಾಲ್. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ, ಎಷ್ಟೇ ಪಿತೂರಿ ಮಾಡಿದರೂ 2024ರ ಚುನಾವಣೆ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ನಡೆಯಲಿದೆ" ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಳ್ಳು ಆರೋಪಗಳ ಮೇಲೆ ನನ್ನನ್ನು ಜೈಲಿಗೆ ಹಾಕಲು ಸಂಚು ರೂಪಿಸಲಾಗುತ್ತಿದೆ. ನಮ್ಮ ವಿರುದ್ಧ ಮಾಡಿದ ಯಾವುದೇ ಸುಳ್ಳು ಆರೋಪ ನಿಲ್ಲುವುದಿಲ್ಲ. ದೇವರು ನಮ್ಮೊಂದಿಗಿದ್ದಾನೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅವರ ಪ್ರತಿಯೊಂದು ಪಿತೂರಿ ವಿಫಲಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
"ದೆಹಲಿ ಅಬಕಾರಿ ಹಗರಣದ ಮುಖ್ಯ ಸೂತ್ರಧಾರ ಕೇಜ್ರಿವಾಲ್":ತಮ್ಮ ಮನೆ ಮೇಲಿನ ಸಿಬಿಐ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸಚಿವ ಮನೀಶ್ ಸಿಸೋಡಿಯಾ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿನ ಮದ್ಯ ಹಗರಣದ 'ಕಿಂಗ್‌ಪಿನ್' ಎಂದು ಅನುರಾಗ್ ಠಾಕೂರ್ ಬಣ್ಣಿಸಿದ್ದಾರೆ. ಅಲ್ಲದೇ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಮನಿ..ಶ್(ಹಣದಾಹಿ) ಹಾಗೂ ಮದ್ಯ ಹಗರಣದ ಆರೋಪಿ ನಂ.1 ಎಂದು ಕೇಂದ್ರ ಸಚಿವರು ಬಣ್ಣಿಸಿದ್ದಾರೆ.