ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು 'ತೀವ್ರ' ಕಳಪೆ ಮಟ್ಟಕ್ಕೆ ಕುಸಿದಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ & ರಿಸರ್ಚ್ (SAFAR) ಪ್ರಕಾರ, ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು 499 ರಷ್ಟಿದೆ ಎಂದು ತಿಳಿದು ಬಂದಿದೆ.
ಇಂದು ದೆಹಲಿಯ ಲೋಧಿ ರಸ್ತೆಯ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 476 ವರದಿಯಾಗಿದೆ. ಐಐಟಿ ದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 479 ಇದೆ. ಮತ್ತು ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಪ್ರದೇಶದಲ್ಲಿ AQI 578 ದಾಖಲಾಗಿದೆ.
ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ:
ಸರ್ಕಾರಿ ಏಜೆನ್ಸಿಗಳ ಪ್ರಕಾರ, 0 ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' (ಅಪಾಯಕಾರಿ) ಎಂದು ಪರಿಗಣಿಸಲಾಗುತ್ತದೆ.
ಇನ್ನು ದೆಹಲಿಯಲ್ಲಿ ಗಾಳಿಯ ಗುಣಮಟ್ಟ AQI (Air Quality Index) ಕುಸಿದಿದ್ದು, ಪಿಎಂ 10 ವಾಯು ಗುಣಮಟ್ಟ ದಾಖಲಾಗಿದೆ. ಕಳಪೆ ಗಾಳಿಯಿಂದಾಗಿ ಶ್ವಾಸಕೋಶ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಕೆಮ್ಮು ಅಥವಾ ಉಸಿರಾಟದ ತೊಂದರೆ, ಅಸ್ತಮಾ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.