ನವದೆಹಲಿ: ಐಆರ್‌ಸಿಟಿಸಿ ಹಗರಣದಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸುವಂತೆ ಸಿಬಿಐ ಮನವಿ ಮಾಡಿತ್ತು. ಐಆರ್‌ಸಿಟಿಸಿ ಹಗರಣ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಇಂದು ಆಗಮಿಸಿದ್ದರು. ತೇಜಸ್ವಿ ಜಾಮೀನು ರದ್ದುಗೊಳಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಮುನ್ನ ಸೆಪ್ಟೆಂಬರ್ 17 ರಂದು ನ್ಯಾಯಾಲಯ ತೇಜಸ್ವಿ ಯಾದವ್‌ಗೆ ನೋಟಿಸ್ ಜಾರಿಗೊಳಿಸಿ, ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ತಪ್ಪಿದಲ್ಲಿ ಜಾಮೀನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು. ತನಿಖೆಯ ಮೇಲೆ ಪ್ರಭಾವ ಬೀರಲು ತೇಜಸ್ವಿ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ. ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ದೇಶದ ಸಂವಿಧಾನಕ್ಕೂ ಸವಾಲು ಹಾಕಿದ್ದಾರೆ. ಅಲ್ಲದೆ ಅವರು ಆರ್ಥಿಕ ಅಪರಾಧದ ಆರೋಪ ಎದುರಿಸುತ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.