ನವದೆಹಲಿ:ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ಸದ್ಯದ ಸಂಘರ್ಷದ ಪರಿಸ್ಥಿತಿ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ರಕ್ಷಣಾ ಸಚಿವರ ಕಚೇರಿ ಪ್ರಕಟಿಸಿದೆ.
ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಬೇಡಿಕೆ ಇಟ್ಟ ನಂತರ ಕಚೇರಿಯು ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಇತ್ತೀಚೆಗೆ ಎಲ್‌ಎಸಿ ನಿಲುವು ಕುರಿತು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ಸಿಂಗ್ ಅವರ ಹೇಳಿಕೆಯು ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವನ್ನು ಕೆಡಿಸಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದರು.
"ಕೇಂದ್ರ ಸಚಿವ ವಿಕೆ ಸಿಂಗ್ ಅವರು ಎಲ್‌ಎಸಿ ಅತಿಕ್ರಮಣಗಳ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕವಾಗಿ ತಿಳಿಸಿದ್ದಾರೆ. ಇದು ಚೀನಾಗೆ ನಮ್ಮ ಚಿತ್ರಣದ ಕುರಿತು ಕಳಂಕ ತರುವ ಅವಕಾಶವನ್ನು ನೀಡುತ್ತದೆ" ಎಂದು ಚೌಧರಿ ಹೇಳಿದ್ದರು.
"ಎಲ್ಎಸಿ ಮತ್ತು ವಿ ಕೆ ಸಿಂಗ್ ಹೇಳಿಕೆಯ ಮೇಲೆ ಇತ್ತೀಚಿನ ಪರಿಸ್ಥಿತಿಯ ಕುರಿತು ಬೆಳಕು ಚೆಲ್ಲುವಂತೆ ನಾನು ರಕ್ಷಣಾ ಸಚಿವರನ್ನು ವಿನಂತಿಸುತ್ತೇನೆ" ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದರು.
ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ವಿ ಕೆ ಸಿಂಗ್, ಭಾರತ ಮತ್ತು ಚೀನಾ ಎರಡೂ ದೇಶಗಳು ಗುರುತಿಸದ ಎಲ್‌ಎಸಿಯನ್ನು ಹಲವು ಬಾರಿ ದಾಟಿದೆ ಎಂದಿದ್ದರು.
"ಚೀನಾ 10 ಬಾರಿ ಅತಿಕ್ರಮಣ ಮಾಡಿದ್ದರೆ, ನಾವು ಅದನ್ನು ಕನಿಷ್ಠ 50 ಬಾರಿ ಮಾಡಿರಬೇಕು" ಎಂದು ಅವರು ಹೇಳಿಕೆ ನೀಡಿದ್ದರು.