ಕರ್ನಾಟಕ

karnataka

ETV Bharat / bharat

Predator drone: ಅಮೆರಿಕದಿಂದ ಅತ್ಯಾಧುನಿಕ ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ - 21ರಿಂದ ಮೋದಿ ಅಮೆರಿಕ ಪ್ರವಾಸ

ಅಮೆರಿಕ ಹಾಗೂ ಜಾಗತಿಕ ಸೇನಾಪಡೆಗಳಲ್ಲಿ ಬಳಸುವ ಮಾನವರಹಿತ ವೈಮಾನಿಕ ವಾಹನಗಳಾದ ಪ್ರಿಡೇಟರ್​ ಡ್ರೋನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ ಇಂದು ಅನುಮೋದನೆ ನೀಡಿದೆ.

Defence Ministry approves Predator drone deal with US final clearance to be given by CCS
ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ ಅನುಮೋದನೆ

By

Published : Jun 15, 2023, 4:07 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆ ಕೇಂದ್ರ ರಕ್ಷಣಾ ಸಚಿವಾಲಯವು ಅಮೆರಿಕದಿಂದ ಅತ್ಯಾಧುನಿಕ ಪ್ರಿಡೇಟರ್ (MQ-9 ರೀಪರ್) ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ಗುರುವಾರ ಅನುಮೋದನೆ ನೀಡಿತು. ಈ ಬಗ್ಗೆ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ (Cabinet Committee on Security - CCS) ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.

ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ಇಂದು ರಕ್ಷಣಾ ಸ್ವಾಧೀನ ಮಂಡಳಿ (Defence Acquisition Council - DAC) ಸಭೆ ಒಪ್ಪಿಗೆ ಕೊಟ್ಟಿದೆ. ಈ ಖರೀದಿ ಪ್ರಸ್ತಾವನೆಯನ್ನು ಭದ್ರತಾ ಸಂಪುಟ ಸಮಿತಿಯು ಅಂತಿಮಗೊಳಿಸಿದ ನಂತರ ಅದರ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

ರಕ್ಷಣಾ ಖರೀದಿ ಒಪ್ಪಂದಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಡಿಎಸಿ ರಕ್ಷಣಾ ಸಚಿವಾಲಯದ ಉನ್ನತ ಸಂಸ್ಥೆಯಾಗಿದೆ. ಆದರೆ, ಅತ್ಯಧಿಕ ಮೌಲ್ಯದ ಖರೀದಿ ಒಪ್ಪಂದಗಳಿಗೆ ಸಿಸಿಎಸ್​ ಅಂತಿಮ ಅನುಮೋದನೆ ನೀಡುತ್ತದೆ. ಭಾರತೀಯ ನೌಕಾಪಡೆಯು ಈ ಒಪ್ಪಂದದ ಪ್ರಮುಖ ಭಾಗೀದಾರ ಸಂಸ್ಥೆಯಾಗಿದೆ. ತನ್ನ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಾಚರಣೆಗಾಗಿ 15 ಡ್ರೋನ್‌ಗಳು ಕಡಲ ಪಡೆ ಪಡೆಯಲಿದೆ. ಮೂರು ಸೇನೆಗಳು ಸ್ಥಳೀಯ ಮೂಲಗಳಿಂದ ಒಂದೇ ರೀತಿಯ ಮಧ್ಯಮ ಎತ್ತರ ಮತ್ತು ದೀರ್ಘ ಸಹಿಷ್ಣುತೆಯ ಡ್ರೋನ್‌ಗಳನ್ನು ಹೊಂದುವ ಯೋಜನೆಗಳನ್ನು ಹಾಕಿಕೊಂಡಿವೆ.

ಜೂನ್ 21ರಿಂದ ಮೋದಿ ಅಮೆರಿಕ ಪ್ರವಾಸ: ಪ್ರಧಾನಿ ಮೋದಿ ಜೂನ್ 21ರಿಂದ 24 ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅವರು ಮೋದಿ ಅವರಿಗೆ ಶ್ವೇತಭವನದಲ್ಲಿ ಅದ್ಧೂರಿ ಆತಿಥ್ಯ ನೀಡಲಿದ್ದಾರೆ. ಇದೇ ವೇಳೆ ಅಮೆರಿಕ ಕಾಂಗ್ರೆಸ್​ನ ಜಂಟಿ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುವ ಕಾರ್ಯಕ್ರಮವಿದೆ. ಈ ಮೂಲಕ ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆ ಉದ್ದೇಶಿಸಿ ಭಾಷಣ ಮಾಡುವ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.

ಅಮೆರಿಕ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅವರಿಗೆ ಅಮೆರಿಕ ಕಾಂಗ್ರೆಸ್​ ಆಹ್ವಾನ ನೀಡಿದೆ. ಈ ಕುರಿತು ಪತ್ರಿಕಾ ಬಿಡುಗಡೆ ಮಾಡಿರುವ ಅಮೆರಿಕ​ ಕಾಂಗ್ರೆಸ್, ಭಾರತದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನ ಹಂಚಿಕೊಳ್ಳಲು ಮತ್ತು ಅಮೆರಿಕ ಹಾಗೂ ಭಾರತ ಎರಡೂ ದೇಶಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರಿಗೆ ಆಹ್ವಾನಿಸಿದೆ.

ಇದನ್ನೂ ಓದಿ:ಅಮೆರಿಕ ಕಾಂಗ್ರೆಸ್ ಜಂಟಿ ಸಭೆ ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿಗೆ ಆಹ್ವಾನ!

ABOUT THE AUTHOR

...view details