ಪಾಟ್ನಾ(ಬಿಹಾರ): ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ನಾಲ್ವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವರು ಅಸ್ವಸ್ಥರಾಗಿದ್ದು, ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗೋಪಾಲ್‌ಗಂಜ್ ಜಿಲ್ಲೆಯ ಮೊಹಮದ್ಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಾಲ್‌ಗಂಜ್ ಜಿಲ್ಲಾಧಿಕಾರಿ ಡಾ. ನವಲ್ ಕಿಶೋರ್ ಚೌಧರಿ ನಿಗೂಢ ಕಾರಣದಿಂದ ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ದುರ್ಘಟನೆಯಿಂದ ಸಂತ್ರಸ್ತರಾದವರ ಮನೆಗಳಿಂದ ನಾವು ಸ್ಯಾಂಪಲ್ಗಳನ್ನು ಸಂಗ್ರಹ ಮಾಡಿದ್ದು, ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ಅವಘಡಕ್ಕೆ ಕಾರಣ ಗೊತ್ತಾಗಲಿದೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.