ಚೆನ್ನೈ(ತಮಿಳುನಾಡು): ಬಂಗಾಳಕೊಲ್ಲಿಯಲ್ಲಿ ಶನಿವಾರ ಉಂಟಾಗಿದ್ದ ವಾಯುಭಾರ ಕುಸಿತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಮಿಚೌಂಗ್ ಎಂಬ ಹೆಸರಿನ ಚಂಡಮಾರುತವು ಪ್ರಬಲ ಗಾಳಿಯೊಂದಿಗೆ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಮಂಗಳವಾರ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದ್ದು ತಮಿಳುನಾಡಿನ ಡೆಲ್ಟಾ ಜಿಲ್ಲೆಗಳಲ್ಲಿ ಜೋರು ಮಳೆ ಸುರಿಯುವ ಸಾಧ್ಯತೆ ಇದೆ. ಚಂಡಮಾರುತವು ವಾಯುವ್ಯಕ್ಕೆ ಚಲಿಸಲಿದ್ದು ಮತ್ತು ಡಿಸೆಂಬರ್ 4ರ ಮುಂಜಾನೆಯ ಸುಮಾರಿಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯ ಮಧ್ಯ ಕೊಲ್ಲಿ ತಲುಪಲಿದೆ ಎಂದು ಚೆನ್ನೈನ ಹವಾಮಾನ ಉಪನಿರ್ದೇಶಕ ಎಸ್.ಬಾಲಚಂದ್ರನ್ ಮಾಹಿತಿ ನೀಡಿದರು.
ವಿಶಾಖಪಟ್ಟಣಂ ಸೈಕ್ಲೋನ್ ವಾರ್ನಿಂಗ್ ಸೆಂಟರ್ ನಿರ್ದೇಶಕಿ ಸುನಂದಾ ಮಾಹಿತಿ ನೀಡಿದ್ದು, ಚೆನ್ನೈನಿಂದ ಆಗ್ನೇಯಕ್ಕೆ 420 ಕಿಲೋಮೀಟರ್ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಾರುತ ಮತ್ತಷ್ಟು ತೀವ್ರಗೊಳ್ಳಲಿದ್ದು, ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಲಿದೆ. ಬಳಿಕ ದಕ್ಷಿಣ ಆಂಧ್ರ ಕರಾವಳಿ ತಲುಪಲಿದೆ. ಈ ವೇಳೆ ಕ್ರಮೇಣ ಹೆಚ್ಚು ಮಳೆ ಬೀಳಬಹುದು ಎಂದರು.
ಈಗಾಗಲೇ ದಕ್ಷಿಣ ಆಂಧ್ರ ಕರಾವಳಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 55 ಕಿ.ಮೀಗೆ ಪರಿವರ್ತನೆ ಆಗಿದೆ. ಚಂಡಮಾರುತದ ತೀವ್ರತೆ ಹೆಚ್ಚಾದಂತೆ ಗಾಳಿಯ ವೇಗ ಗಂಟೆಗೆ 90 ಕಿ.ಮೀ.ಗೆ ಏರಲಿದೆ. ಹೀಗಾಗಿ ಮೀನುಗಾರರಿಗೆ ಡಿಸೆಂಬರ್ 3ರಿಂದ 6ರವರೆಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಡಿ.3, 4, 5ರಂದು ಮಳೆಯಾಗಲಿದ್ದು ಬಳಿಕ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಅಂಡಮಾನ್ ನಿಕೋಬಾರ್ ದ್ವೀಪಗಳ ಬಳಿ ವಾಯುಭಾರ ಕುಸಿತ: ಚಂಡಮಾರುತ ಅಪ್ಪಳಿಸುವ ಸಾಧ್ಯತೆ