ನವದೆಹಲಿ:ದೇಶದ ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ಇಂದು ಚುನಾವಣೆ ನಡೆಯುತ್ತಿದ್ದು, ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಸೇರಿದಂತೆ ಅನೇಕರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇದರ ಮಧ್ಯೆ ವಿಪಕ್ಷಗಳ ಶಾಸಕರು ಎನ್ಡಿಎ ಅಭ್ಯರ್ಥಿ ಪರವಾಗಿ ಮತ ಚಲಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗುಜರಾತ್ನ ಎನ್ಸಿಪಿ ಶಾಸಕ ಕಂಧಲ್ ಜಡೇಜಾ ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಭಾರತೀಯ ಬುಡಕಟ್ಟು ಪಕ್ಷದ ನಾಯಕ ಛೋಟುಭಾಯಿ ವಾಸನ್ ಕೂಡ ಮುರ್ಮು ಪರವಾಗಿ ಮತ ಚಲಾವಣೆ ಮಾಡಿದ್ದಾರೆ.
ಉತ್ತರ ಪ್ರದೇಶ ಬರೇಲಿಯ ಸಮಾಜವಾದಿ ಪಕ್ಷದ ಶಾಸಕ ಶಹಜೀಲ್ ಇಸ್ಲಾಂ ಸಹ ಅಡ್ಡ ಮತದಾನ ಮಾಡಿದ್ದು, ದ್ರೌಪದಿ ಮುರ್ಮು ಅವರಿಗೆ ವೋಟ್ ಹಾಕಿದ್ದಾರೆ. ಒಡಿಶಾದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಎನ್ಡಿಯ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಪರ ವೋಟ್ ಮಾಡಿದ್ದಾರೆ. ಈ ಎಲ್ಲ ಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾಗೆ ಬೆಂಬಲ ಘೋಷಣೆ ಮಾಡಿವೆ.
ಇದನ್ನೂ ಓದಿರಿ:ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ 3 ದಿನದಲ್ಲಿ ಸಂಗ್ರಹವಾಯ್ತು 5.1ಕೋಟಿ ರೂಪಾಯಿ!
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅಕಾಲಿ ದಳದ ಶಾಸಕರೊಬ್ಬರು ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡದಿರಲು ನಿರ್ಧರಿಸಿದ್ದಾರೆ. ಶಾಸಕ ಮನ್ಪ್ರೀತ್ ಸಿಂಗ್ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಈ ಪಕ್ಷ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ.