ರಾಂಚಿ(ಜಾರ್ಖಂಡ್):ಪಾಟ್ನಾ- ಹತಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್ಸ್ಟೇಬಲ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಜು.26ರಂದು ಪಾಟ್ನಾದಿಂದ ಮಹಿಳೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಪಾಟ್ನಾ- ಹತಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಂಚಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ರೈಲು ಕೊಡೆರ್ಮಾ ನಿಲ್ದಾಣಕ್ಕೆ ತಲುಪಿದಾಗ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ತಮ್ಮ ಸೀಟಿನಲ್ಲಿ ಮಲಗಿದ್ದರು. ಈ ವೇಳೆ ಮಹಿಳೆ ಎಚ್ಚರಗೊಂಡು ನೋಡೊದಾಗ ರೈಫಲ್ ಹಿಡಿದ ಆರ್ಪಿಎಫ್ನ ಭದ್ರತಾ ಸಿಬ್ಬಂದಿಯೊಬ್ಬ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ತಕ್ಷಣ ಮಹಿಳೆ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಬೋಗಿಯಲ್ಲಿದ್ದ ಸಹ ಪ್ರಯಾಣಿಕರು ಆರೋಪಿ ಭದ್ರತಾ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವಿಷಯದ ಗಂಭೀರತೆ ಅರಿತು ಅಲ್ಲಿಗೆ ಆಗಮಿಸಿದ ಇತರ ಭದ್ರತಾ ಸಿಬ್ಬಂದಿ ಆರೋಪಿಯನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಮರುದಿನ ಬೆಳಿಗ್ಗೆ ರಾಂಚಿ ತಲುಪಿದ ಮಹಿಳೆ, ಆರೋಪಿ ಆರ್ಪಿಎಫ್ನ ಭದ್ರತಾ ಸಿಬ್ಬಂದಿಯ ವಿರುದ್ಧ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ರಾಂಚಿಯ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಘಟನೆ ನಡೆದಿದ್ದ ಕೊಡೆರ್ಮಾ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಜುಲೈ 27 ರಂದು ಮಹಿಳೆಯೊಬ್ಬರು ಆರ್‌ಪಿಎಫ್ ಕಾನ್ಸ್ಟೇಬಲ್ ವಿರುದ್ಧ ದೂರು ನೀಡಲು ಬಂದಿದ್ದರು, ತಕ್ಷಣವೇ ಅವರ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಾಂಚಿ ಜಿಆರ್‌ಪಿ ಪೊಲೀಸ್ ಠಾಣಾಧಿಕಾರಿ ರೂಪೇಶ್ ಕುಮಾರ್ ಹೇಳಿದ್ದಾರೆ.