ವಾರಾಣಸಿ(ಉತ್ತರ ಪ್ರದೇಶ):ಜಿಲ್ಲೆಯ ಚೋಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈದ್ಯರ ನಿರ್ಲಕ್ಷ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವರ್ಷಗಳ ನಂತರ ಪ್ರಕರಣ ದಾಖಲಾಗಿದೆ. ಸ್ಟೋನ್ ಆಪರೇಷನ್ಗೆ ಹೋಗಿದ್ದ ಮಹಿಳೆಯ ಗರ್ಭಕೋಶವನ್ನು ವೈದ್ಯರು ತೆಗೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆಯನ್ನು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಗರ್ಭಾಶಯ ಇಲ್ಲದಿರುವುದು ಪತ್ತೆಯಾಗಿದೆ. ಅಂದಿನಿಂದ ಸಂತ್ರಸ್ತೆ ಪ್ರಕರಣದ ವಿರುದ್ಧ ಕಾನೂನು ಕ್ರಮಕ್ಕಾಗಿ ಓಡುತ್ತಿದ್ದರು. ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಅಫಜಲಪುರ ತಾಲೂಕಾಸ್ಪತ್ರೆಯಲ್ಲಿ ಮಗು ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ
ಪ್ರಕರಣದ ವಿವರ:ಮಾ. 2020ರಲ್ಲಿ ಇಲ್ಲಿನ ಬೇಲಾ ಗ್ರಾಮದ ನಿವಾಸಿ ಗೋವಿಂದ್ ಮೌರ್ಯ ಅವರ ಪತ್ನಿ ಉಷಾ ಮೌರ್ಯ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದಾದ ಬಳಿಕ ಅವರು ಆಶಾ ಕಾರ್ಯಕರ್ತೆ ಆಶಾ ಯಾದವ್ ಅವರನ್ನು ಸಂಪರ್ಕಿಸಿದ್ದರು. ಆಶಾ ಅವರ ಸಲಹೆಯಂತೆ ಉಷಾ ಅವರು ಮೊಹವ್‌ನಲ್ಲಿರುವ ಓಂ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ ವೈದ್ಯರನ್ನು ಭೇಟಿಯಾಗಿದ್ದರು. ಆಗ ವೈದ್ಯರು ಉಷಾ ಅವರನ್ನು ಕೂಡಲೇ ಅಡ್ಮಿಟ್ ಮಾಡುವಂತೆ ಹೇಳಿದ್ದರು.
ಮೇ 21, 2020 ರಂದು ಆಸ್ಪತ್ರೆಯ ವೈದ್ಯ ಪ್ರವೀಣ್ ತಿವಾರಿ ಅವರು ಪಿತ್ತಕೋಶದ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಬಳಿಕ ಸುಮಾರು 2 ವರ್ಷಗಳ ನಂತರ ಉಷಾ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದಾದ ನಂತರ ಚೋಳಾಪುರದ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪತಿ ಗೋವಿಂದ್ ಪತ್ನಿಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿದ್ದರು. ಅದರಂತೆ ವರದಿಯಲ್ಲಿ ಆಕೆಯ ಪಿತ್ತಕೋಶದ ಕಲ್ಲಿನ ಗಾತ್ರವು ಈಗಾಗಲೇ ಹೆಚ್ಚಾಗಿರುವುದು ಮತ್ತು ಆಕೆಯ ಗರ್ಭಾಶಯ ಇಲ್ಲದಿರುವುದು ಪತ್ತೆಯಾಗಿದೆ.
ಜೀವ ಬೆದರಿಕೆ ಆರೋಪ: ತಕ್ಷಣ ಅವರು ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ವಿಚಾರಣೆ ನಡೆಯಲಿಲ್ಲ. ಮಾರ್ಚ್ 15, 2023 ರಂದು ಅವರು ಮತ್ತೊಮ್ಮೆ ವೈದ್ಯರನ್ನು ಸಂಪರ್ಕಿಸಿ ಅಲ್ಟ್ರಾಸೌಂಡ್ ಪರೀಕ್ಷೆಯ ವರದಿಯನ್ನು ತೋರಿಸಿ ಘಟನೆಯ ಬಗ್ಗೆ ದೂರಿದರು. ಇದಾದ ಬಳಿಕ ಕುಪಿತಗೊಂಡ ವೈದ್ಯ ಡಾ.ಪ್ರವೀಣ್ ಜೈಲಿಗೆ ಕಳುಹಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಷಾ ಆರೋಪಿಸಿದ್ದಾರೆ.
ಇಬ್ಬರ ವಿರುದ್ಧ ಪ್ರಕರಣ: ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೂರು ನೀಡಿದ ನಂತರ ಸುಮಾರು 3 ವರ್ಷಗಳ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳಾದ ಡಾ.ಪ್ರವೀಣ್ ತಿವಾರಿ ಹಾಗೂ ಆಶಾ ಕಾರ್ಯಕರ್ತೆ ಆಶಾ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೈದ್ಯ ಹಾಗೂ ಆಶಾ ಕಾರ್ಯಕರ್ತೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಚೋಳಾಪುರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯ ಆರೋಪ - ತಾಯಿ ಸಾವು, ಅನಾಥವಾದ ನವಜಾತ ಶಿಶು!