ಹತ್ರಾಸ್, ಉತ್ತರಪ್ರದೇಶ:ಜಿಲ್ಲೆಯಲ್ಲಿ ಮಾನಹಾನಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುರ್ಸಾನ್ನ ಗ್ರಾಮವೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿದೆ. ಅಷ್ಟೇ ಅಲ್ಲ ಅತ್ಯಾಚಾರದ ವಿಡಿಯೋ ಚಿತ್ರಿಕರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಸದ್ಯ ಅತ್ಯಾಚಾರ ವಿಡಿಯೋ ವೈರಲ್ ಆಗಿದ್ದು, ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ಮಹಿಳೆಯ ಪತಿ ಟ್ರಕ್ ಚಾಲಕ. ಹೀಗಾಗಿ ಅವರು ಹೆಚ್ಚಿನ ಸಮಯ ಮನೆಯಿಂದ ಹೊರಗೇ ಇರುತ್ತಾರೆ. ತನ್ನ ಮಕ್ಕಳೊಂದಿಗೆ ಒಂಟಿಯಾಗಿ ವಾಸಿಸುತ್ತಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಕಳೆದ ಫೆಬ್ರವರಿ 26 ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದರು. ಸಾಸಿವೆ ಗದ್ದೆಗೆ ಆಕೆ ತಲುಪುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ಗ್ರಾಮದ ನಾಲ್ವರು ಯುವಕರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಯುವಕನೊಬ್ಬ ತನ್ನ ಬಳಿಯಿದ್ದ ಪಿಸ್ತೂಲ್ ಹೊರ ತೆಗೆದು ಆಕೆ ತಲೆಗೆ ಗುರಿ ಇಟ್ಟಿದ್ದಾನೆ. ಬಳಿಕ ಕೂಗಾಡಿದ್ರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಉಳಿದ ಮೂವರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಗದ್ದೆಯೊಳಗೆ ಕರೆದೊಯ್ದರು. ಬಳಿಕ ನಾಲ್ವರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಆರೋಪಿಗಳು ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.