ನವದೆಹಲಿ:'ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯ ಅಧಿಕಾರಿ' ಎಂದು ಸುಳ್ಳು ಹೇಳಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಹಿರಿಯ ಅಧಿಕಾರಿಯಾಗಿ ನೇಮಕಗೊಳ್ಳಲು ಯತ್ನಿಸಿದ ಆರೋಪದ ಮೇಲೆ ನಿರುದ್ಯೋಗಿ ಸಿವಿಲ್ ಇಂಜಿನಿಯರ್‌ವೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನಿವಾಸಿ 48 ವರ್ಷದ ರಾಬಿನ್ ಉಪಾಧ್ಯಾಯ ಎಂಬಾತ 25 ವರ್ಷಗಳಿಂದ ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಎಕ್ಸ್‌ಪ್ರೆಸ್‌ವೇ ಯೋಜನೆಯ ಸಂಯೋಜಕ ಹುದ್ದೆ ಗಿಟ್ಟಿಸಿಕೊಳ್ಳಲು ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ಷತ್ ಶರ್ಮಾ ಎಂಬಾತ ನವದೆಹಲಿ ಸೈಬರ್ ಪೊಲೀಸ್ ಠಾಣೆ ಸಂಪರ್ಕಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ದೂರಿನಂತೆ, ಅಕ್ಷತ್ ಶರ್ಮಾರ ಅಧಿಕೃತ ಇ-ಮೇಲ್ ಐಡಿಗೆ ಅಧಿಕಾರಿ ರಾಜೀವ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಇಮೇಲ್ ವಿಳಾಸದಿಂದ ಮೇಲ್ ಬಂದಿದೆ. ಅದರಲ್ಲಿ ಆತ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದೇನೆ. ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಧಿಕಾರಿಯಾಗಿ ನೇಮಿಸಿಕೊಳ್ಳಿ ಎಂದು ಸೂಚಿಸಿದ್ದನಂತೆ. ದೂರಿನಂತೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು rajeev.osd.mha@gmail.com ಇಮೇಲ್ ವಿಳಾಸವನ್ನು ಪರಿಶೀಲಿಸಿದ್ದು, ಈ ವಿಳಾಸವು ನಕಲಿ ಮತ್ತು ಜನರನ್ನು ವಂಚಿಸುವ ಉದ್ದೇಶದಿಂದ ತೆರೆಯಲಾಗಿದೆ ಎಂದು ಕಂಡುಹಿಡಿದಿದ್ದಾರೆ. ನಕಲಿ ಮೇಲ್ ಖಾತೆಯನ್ನು 6-7 ದಿನಗಳ ಹಿಂದಷ್ಟೇ ರಚಿಸಲಾಗಿದೆ ಎಂದು ಗೊತ್ತಾಗಿದೆ.
ಆರೋಪಿಗಾಗಿ ಶೋಧ ನಡೆಸಿದ್ದು ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ಶನಿವಾರ ಸಂಜೆ ಮೀರತ್‌ನಲ್ಲಿರುವ ಆರೋಪಿಯನ್ನು ಆತನ ಮನೆಯಿಂದಲೇ ಬಂಧಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಉಪಆಯುಕ್ತ ಹೇಮಂತ್ ತಿವಾರಿ ತಿಳಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ರಾಬಿನ್ ಉಪಾಧ್ಯಾಯ ಸಿವಿಲ್ ಇಂಜಿನಿಯರ್ ಆಗಿದ್ದು, ಸಿವಿಲ್ ನಿರ್ಮಾಣ ಯೋಜನೆಗಳಲ್ಲಿ ಅಪಾರ ಅನುಭವ ಹೊಂದಿದ್ದ. ಕೆಲಸ ಪಡೆಯಲು ನಕಲಿ ಮಾಹಿತಿ ನೀಡುತ್ತಿದ್ದ. ಪ್ರಸ್ತುತ ಚಾಲ್ತಿಯಲ್ಲಿರುವ ಹೆದ್ದಾರಿ ಯೋಜನೆಗಳು ಮತ್ತು ಅವುಗಳ ಪ್ರಗತಿ ಹುಡುಕಿದ್ದು, ವಿಶೇಷ ಕರ್ತವ್ಯದ ಅಧಿಕಾರಿ ಎಂಬ ನಕಲಿ ಇಮೇಲ್ ಐಡಿ ರಚಿಸಿದ್ದನು. ಕೆಲಸ ಪಡೆಯಲು ದಾಖಲೆಗಳನ್ನು ನೀಡುವಾಗ ತಮ್ಮ CV ಅನ್ನು ಸಹ ಲಗತ್ತಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಮಂತ್ ತಿವಾರಿ ತಿಳಿಸಿದ್ದಾರೆ.
ಪಿಎಂಒ ಅಧಿಕಾರಿ ಎಂದು ಹೇಳಿ ವಂಚನೆ!: ಕಿರಣ್ ಪಟೇಲ್ ಎನ್ನುವಾತ ಪಿಎಂಒ ಉನ್ನತ ಮಟ್ಟದ ಅಧಿಕಾರಿ ಎಂದು ನಂಬಿಸಿ 4 ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಲ್ಲದೆ, ಪಂಚತಾರಾ ಹೊಟೇಲ್‌ನಲ್ಲಿ ಆತಿಥ್ಯ ಪಡೆದುಕೊಂಡಿದ್ದ. ಅಷ್ಟೇ ಅಲ್ಲ, ವಿಶೇಷ ಭದ್ರತೆ ಹಾಗೂ ಬುಲೆಟ್ ಪ್ರೂಫ್ ವಾಹನವನ್ನೂ ಪಡೆದು ಕಾಶ್ಮೀರದಲ್ಲಿ ಕಿರಣ್ ಪಟೇಲ್ ಸುತ್ತಾಡಿದ್ದ. ಆದರೆ, 4 ತಿಂಗಳ ಹಿಂದೆ ಕಿರಣ್ ಪಟೇಲ್ ಒಬ್ಬ ನಕಲಿ ಅಧಿಕಾರಿ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಬಂಧಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಈತನಿಗೆ ಅನುಚಿತ ಪ್ರೋಟೋಕಾಲ್ಗೆ ಅನುಕೂಲ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ತಿಳಿಸಿದ್ದರು.
ಇದನ್ನೂ ಓದಿ:ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ ಬ್ಯಾಂಕ್ ಖಾತೆಯಿಂದ ₹2 ಲಕ್ಷ ದೋಚಿದ ಖದೀಮರು!