ಕೊರೊನಾ ತನ್ನ ಆರ್ಭಟವನ್ನು ರೂಪಾಂತರಿ ತಳಿಗಳ ಮೂಲಕ ಹೆಚ್ಚಿಸುತ್ತಾ ಬರುತ್ತಿದೆ. ಅದರಂತೆ ದೇಶದಲ್ಲಿ ಸೋಂಕು ನಿರ್ಮೂಲನೆಗೆ ಲಸಿಕೆ ಎಂಬ ರಾಮಬಾಣವನ್ನೂ ನೀಡಲಾಗುತ್ತಿದ್ದು, ಸೋಂಕು ಪ್ರಸರಣವನ್ನು ತಡೆದು ನಿಲ್ಲಿಸುವ ಸರ್ವ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆದರೂ ಕೂಡಾ ದೇಶಾದ್ಯಂತ ಕೊರೊನಾದ ಆರ್ಭಟ ಜೋರಾಗಿಯೇ ಸಾಗುತ್ತಿದೆ. ಇದನ್ನೆಲ್ಲಾ ಗಮನಿಸಿದರೆ ಎಲ್ಲಿ ಮತ್ತೆ ಲಾಕ್ಡೌನ್ ಆಗುವುದೋ? ಎಂಬ ಆತಂಕ, ಕಳವಳ ಜನರನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ.
1. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಹಾವಳಿ ತೀವ್ರವಾಗಿದೆ. ಪರಿಣಾಮ, ಕೇಜ್ರಿವಾಲ್ ಸರ್ಕಾರ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಇದರಿಂದ ವಾರಾಂತ್ಯದ ಎರಡು ದಿನ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇಂದು 5,500 ಹೊಸ ಕೇಸ್ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ 8.5 ತಲುಪಿದೆ.
2. ಉತ್ತರ ಪ್ರದೇಶದ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿಂದು 33 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 32 ಆಸ್ಪತ್ರೆ ಸಿಬ್ಬಂದಿ ಮತ್ತು 1 ತುರ್ತು ವೈದ್ಯರು ಸೇರಿದ್ದಾರೆ. ಎಲ್ಲರೂ ಲಕ್ಷಣರಹಿತರಾಗಿದ್ದಾರೆ.
3.ಮಹಾರಾಷ್ಟ್ರದಲ್ಲಿ ಇಂದು ಸಂಜೆ ಗೋವಾದಿಂದ ಮುಂಬೈಗೆ ತಲುಪಲಿರುವ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿರುವ ಪ್ರತಿಯೊಬ್ಬರನ್ನೂ ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಹಡಗಿನಲ್ಲಿ ಇರುವ 66 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಇದೇ ವೇಳೆ, ಮುಂಬೈನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 8 ಸಾವಿರಕ್ಕೂ ಅಧಿಕ ಕೋವಿಡ್-19 ಸೋಂಕಿತ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದು 20 ಸಾವಿರದ ಗಡಿ ದಾಟಿದರೆ ಲಾಕ್ಡೌನ್ ಹೇರಿಕೆ ಮಾಡಬೇಕಾಗುತ್ತದೆ ಎಂದು ಮುಂಬೈ ಮೇಯರ್ ತಿಳಿಸಿದ್ದಾರೆ.
4.ಪಂಜಾಬ್ನ ಪಟಿಯಾಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 102 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಎಲ್ಲಾ ಪ್ರಕರಣಗಳಲ್ಲಿ ಒಮಿಕ್ರಾನ್ ರೂಪಾಂತರದ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಪರಿಣಾಮ ಜೀನೋಮ್ ಅನುಕ್ರಮಕ್ಕಾಗಿ ಮಾದರಿಗಳನ್ನು ಕಳುಹಿಸಲಾಗಿದೆ. ಈ ಮೂಲಕ ಪಟಿಯಾಲ ಆಡಳಿತವು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ.
5.ಪಂಜಾಬ್ ಸರ್ಕಾರವು ಕೆಲವು ವಿನಾಯಿತಿಗಳೊಂದಿಗೆ ಪುರಸಭೆಯ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಿದೆ. ಬಾರ್ಗಳು, ಸಿನಿಮಾ ಹಾಲ್ಗಳು, ಮಾಲ್ಗಳು, ರೆಸ್ಟೋರೆಂಟ್ಗಳು, ಸ್ಪಾಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗುತ್ತದೆ. ಸರ್ಕಾರಿ, ಖಾಸಗಿ ಕಚೇರಿಗಳಿಗೆ ಹಾಜರಾಗಲು ಸಂಪೂರ್ಣ ಲಸಿಕೆ ಹಾಕಿದ ಸಿಬ್ಬಂದಿ ಮಾತ್ರ ಅವಕಾಶ ನೀಡಲಾಗಿದೆ.