ನವದೆಹಲಿ:ಕೋವಿಡ್-19 ಸಾಂಕ್ರಾಮಿಕವು ಅನೇಕ ಜೀವಗಳ ಬಲಿ ಪಡೆದಿದೆ. ಮಹಾಮಾರಿಯಿಂದ ಎಳೆ ವಯಸ್ಸಿನ ಮಕ್ಕಳು ತಂದೆ ಅಥವಾ ತಾಯಿ, ಅಥವಾ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ನೋಡಿದರೆ ಹೃದಯ ಕಲಕುತ್ತದೆ ಎಂದು ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಆದರೆ, ಸಾಂಕ್ರಾಮಿಕದ ಸಮಯದಲ್ಲಿ ಅನಾಥರಾಗಿರುವ ಮಕ್ಕಳನ್ನು ಗುರುತಿಸಿ, ಅವರಿಗಾಗಿ ನೂತನ ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆ ತೃಪ್ತಿದಾಯಕವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಸಂತಸ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೇ ಮಕ್ಕಳ ಅಗತ್ಯತೆಗಳನ್ನು ಪೂರೈಸುವ ಕಾರ್ಯ ಮಾಡಲಿದ್ದಾರೆ ಎಂಬ ಭರವಸೆಯಿದೆ ಎಂದು ತಿಳಿಸಿದೆ.
ಪೋಷಕರನ್ನೂ ಕಳೆದುಕೊಂಡ ಲಕ್ಷಕ್ಕೂ ಅಧಿಕ ಮಕ್ಕಳು
'ಮಕ್ಕಳ ರಕ್ಷಣೆ ವಿಚಾರದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ' ಎಂಬ ವಿಷಯದ ಬಗ್ಗೆ ಸು-ಮೋಟೋ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಲ್.ನಾಗೇಶ್ವರ ರಾವ್ ಮತ್ತು ನ್ಯಾ.ಅನಿರುದ್ಧ್ ಬೋಸ್ ಅವರ ನ್ಯಾಯಪೀಠ, ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ-2015 ರ ಅನುಸಾರವಾಗಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಮತ್ತಷ್ಟು ತ್ವರಿತಗೊಳಿಸಬೇಕು ಎಂದು ಹೇಳಿದೆ.