ನವದೆಹಲಿ:ಕೋವಿಡ್ ನಿರ್ವಹಣೆಗೆ ಮತ್ತು ಕೋವಿಡ್ ಸಂಕಷ್ಟದಿಂದ ಪಾರು ಮಾಡಲು ಕೋವ್ಯಾಕ್ಸಿನ್ ತಯಾರಿಸಿ, ದೇಶದ ಜನರಿಗೆ ಸರಬರಾಜು ಮಾಡಿ ಗಮನ ಸೆಳೆದಿರುವ ಹೈದರಾಬಾದ್ನ ಭಾರತ್ ಬಯೋಟೆಕ್ಗೆ ದೇಶದ ಹೆಮ್ಮೆಯ ಪದ್ಮ ಪುರಸ್ಕಾರ ದೊರೆತಿದೆ. ಕಂಪನಿಯ ಗಮನಾರ್ಹ ಸಾಧನೆಯನ್ನ ಗುರುತಿಸಿ ಭಾರತ ಸರ್ಕಾರ ಭಾರತ್ ಬಯೋಟೆಕ್ನ ಎಂ ಡಿ ಕೃಷ್ಣ ಎಲ್ಲ ಹಾಗೂ ಜಂಟಿ ಎಂ ಡಿ ಸುಚಿತ್ರಾ ಎಲ್ಲ ಅವರಿಗೆ ಪದ್ಮ ಪುರಸ್ಕಾರ ನೀಡಿ ಗೌರವಿಸಿದೆ.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಕೃಷ್ಣ ಹಾಗೂ ಸುಚಿತ್ರ ಎಲ್ಲ ರಾಷ್ಟ್ರಪತಿಗಳಿಂದ ಪದ್ಮ ಪುರಸ್ಕಾರ ಸ್ವೀಕರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ.
ಪದ್ಮ ಪ್ರಶಸ್ತಿ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತಿದೆ. ಅಂದರೆ ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆಗಳಲ್ಲಿ ನೀಡುವ ಗಣನೀಯ ಸೇವೆಗಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತದೆ.