ನಾಗ್ಪುರ ( ಮಹಾರಾಷ್ಟ್ರ): ನಟ ಹಾಗೂ ಹೋರಾಟಗಾರ ವೀರ ಸಾಥೀದಾರ್ ಕೊರೊನಾ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇವರ ನಟನೆಯ ‘ಕೋರ್ಟ್’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತಲ್ಲದೇ ಉತ್ತಮ ನಟ ಎಂಬ ಹೆಗ್ಗಳಿಕೆ ಪಡೆದಿದ್ದರು.
62 ವರ್ಷದ ಸಾಥೀದಾರ್ ಕೊರೊನಾದಿಂದ ಗುಣಮುಖರಾದ ಬಳಿಕ ನಾಗ್ಪುರದ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್ ನಂತರದ ಚಿಕಿತ್ಸೆಗೆ ಒಳಗಾಗಿದ್ದರು.
ಆಸ್ಪತ್ರೆ ಮೂಲಗಳು ಹೇಳುವಂತೆ ನ್ಯುಮೋನಿಯಾದಿಂದಾಗಿ ಉಸಿರಾಟ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಅವರಿಗೆ ವಿಶೇಷ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ನೀಡುತ್ತಿರುವಾಗಲೇ ಹೃದಯಾಘಾತದಿಂದ ಅವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೋರ್ಟ್ ಚಿತ್ರದ ನಿರ್ದೇಶಕ ಚೈತನ್ಯ ತಮ್ಹಾನೆ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರು ಕೃತಕ ಉಸಿರಾಟದ ಸಹಾಯದಿಂದ ಬದುಕಿದ್ದರು. ಕೋವಿಡ್ ಬಳಿಕ ವೆಂಟಿಲೇಟರ್ನಲ್ಲಿದ್ದರು. ಇದೊಂದು ದುರದೃಷ್ಟಕರ ಸುದ್ದಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.