ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಯನ್ನು ದೆಹಲಿ ಕೋರ್ಟ್ ಖುಲಾಸೆಗೊಳಿಸಿ ಆದೇಶಿಸಿದೆ. ಆರೋಪಗಳನ್ನು ಸಮಂಜಸವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ತನಿಖೆ ನಡೆಸಿದ ರೀತಿ ಹಾಗೂ ಸಾರ್ವಜನಿಕ ಸಾಕ್ಷಿಗಳನ್ನು ಉಲ್ಲೇಖಿಸಿರುವ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶುಭಂ ದೇವಾಡಿಯಾ ಈ ಆದೇಶ ನೀಡಿದ್ದಾರೆ. ಪ್ರಧಾನಿ ಹತ್ಯೆ ಬೆದರಿಕೆಯ ಅಪರಾಧದಿಂದ ಮೊಹಮ್ಮದ್ ಮುಖ್ತಾರ್ ಅಲಿ ಖುಲಾಸೆಗೊಂಡಿದ್ದಾರೆ. ಈ ಆರೋಪಿ ವಿರುದ್ಧ 2019ರ ಜನವರಿಯಲ್ಲಿ ನಿಂದನೀಯ ಭಾಷೆ ಮತ್ತು ಬೆದರಿಕೆಗಳಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆನಂದ್ ಪರ್ಬತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿ ಆದೇಶ ಹೊರಡಿಸಿದ ನ್ಯಾಯಾಧೀಶರು, "ಎಲ್ಲ ಸಮಂಜಸವಾದ ಅನುಮಾನಗಳನ್ನು ಮೀರಿ ಆರೋಪಿಯ ತಪ್ಪನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆದ್ದರಿಂದ ಆರೋಪಿಯನ್ನು ಐಪಿಸಿ 506 (II) ಆರೋಪದಿಂದ ಖುಲಾಸೆಗೊಳಿಸಲಾಗಿದೆ ಎಂದು ಹೇಳಿದೆ. ಪೊಲೀಸ್ ಕಂಟ್ರೋಲ್ ರೂಂಗೆ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಅದರಲ್ಲಿ ಪ್ರಧಾನಿಗೆ ಕೊಲೆ ಬೆದರಿಕೆಯ ರೂಪದಲ್ಲಿ ಹೇಳಿಕೆಗಳು ಬಂದಿವೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದರೆ, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದು ಎಂದು ನಂಬಲರ್ಹವಾಗಿ ಕಾಣುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ'' ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯ ರಾಜಕೀಯ ಪಕ್ಷಗಳ ಜೊತೆ ಮಾ.9ರಂದು ಸಭೆ ನಡೆಸಲಿರುವ ಚುನಾವಣಾ ಆಯೋಗ..