ಭೋಪಾಲ್(ಮಧ್ಯಪ್ರದೇಶ):ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ನಾನು ಭೋಪಾಲ್‌ಗೆ ಸೇರಿದವನು. ಭೋಪಾಲಿ ಅಲ್ಲ, ಭೋಪಾಲಿ ಪದದ ಅರ್ಥ ಸಲಿಂಗಿ ಎಂದರು. ಈ ಹೇಳಿಕೆ ಮಧ್ಯಪ್ರದೇಶದ ಜನರಿಗೆ ಮಾಡಿರುವ ಅವಮಾನ ಎಂದಿರುವ ಕಾಂಗ್ರೆಸ್, ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ.
ಭೋಪಾಲ್‌ನಲ್ಲಿ ವೆಬ್ಸೈಟೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಭೋಪಾಲ್‌ನಲ್ಲಿ ಬೆಳೆದಿದ್ದೇನೆ. ಭೋಪಾಲ್ ಜನರು ವಿಭಿನ್ನ ಶೈಲಿಯ ಬದುಕನ್ನು ಹೊಂದಿದ್ದಾರೆ. ಅದನ್ನು ನಿಮಗೆ ನಾನು ಯಾವಾಗಲಾದರೂ, ಖಾಸಗಿಯಾಗಿ ವಿವರಿಸುತ್ತೇನೆ. ಯಾರಿಗಾದರೂ ಕೇಳಿ, ಭೋಪಾಲಿ ಎಂದರೆ, ಸಲಿಂಗಕಾಮಿ ಎಂದರ್ಥ. ನೀವು ಬೇಕಾದರೆ ಯಾವುದೇ ಭೋಪಾಲಿಯನ್ನು ಕೇಳಬಹುದು ಎಂದಿದ್ದರು.
ಇತ್ತೀಚೆಗಷ್ಟೇ ಭೋಪಾಲ್ ತಲುಪಿದ್ದ ವಿವೇಕ್ ಅಗ್ನಿಹೋತ್ರಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಅವರನ್ನು ಭೇಟಿಯಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದರು. 'ಕಾಶ್ಮೀರಿ ಹಿಂದೂಗಳ ನೋವು ಮತ್ತು ಸಂಕಟದ ಬಗ್ಗೆ ನೀವು ತೋರಿದ ಸಂವೇದನಾಶೀಲತೆಗೆ ಧನ್ಯವಾದಗಳು. ಈ ನೋವಿನ ಘಟನೆಯನ್ನು ನರಮೇಧ ಎಂದು ಕರೆದ ಮೊದಲ ರಾಜಕಾರಣಿ ನೀವಾಗಿದ್ದೀರಿ ಎಂದು ಧನ್ಯವಾದ ಸಲ್ಲಿಸಿದ್ದರು.
ದಾಖಲೆ ಮುರಿದ ಕಾಶ್ಮೀರ ಫೈಲ್ಸ್: ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮಾಡುವ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ದಾಖಲೆ ಮುರಿದಿದೆ. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಡಿ ಚಿತ್ರ ದಾಖಲೆ ನಿರ್ಮಿಸಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಅಕ್ಷಯ್ ಕುಮಾರ್ ನಿರ್ದೇಶನದ ಸೂರ್ಯವಂಶಿ ಚಿತ್ರವು ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿತ್ತು. ಈಗ ಸೂರ್ಯವಂಶಿ ಚಿತ್ರದ ದಾಖಲೆಯನ್ನು ಮುರಿದು ಕಾಶ್ಮೀರ ಫೈಲ್ಸ್ ಮುನ್ನುಗ್ಗುತ್ತಿದೆ.
ಎರಡನೇ ವಾರದಲ್ಲಿ ಶುಕ್ರವಾರ 19.15 ಕೋಟಿ, ಶನಿವಾರ 24.80 ಕೋಟಿ, ಭಾನುವಾರ 26.20 ಕೋಟಿ, ಸೋಮವಾರ 12.40 ಕೋಟಿ, ಮಂಗಳವಾರ 10.25 ಕೋಟಿ, ಬುಧವಾರ 10.03 ಕೋಟಿಯನ್ನು ಕಾಶ್ಮೀರ ಫೈಲ್ಸ್ ಗಳಿಸಿದ್ದು, ಒಟ್ಟು 200.13 ಕೋಟಿ ಸಂಗ್ರಹಿಸಿದೆ.