ಅಮೃತಸರ: ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಕೆಲವೇ ತಿಂಗಳ ಹಿಂದೆ ರಾಜ್ಯ ಸರ್ಕಾರದಲ್ಲಿ ನೌಕರಿ ಪಡೆದಿದ್ದ ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಎಂಬ ಸಹೋದರರು ಮತಗಟ್ಟೆಗೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಅಮೃತಸರದ ಮಾನಾವಾಲಾ ಮತಗಟ್ಟೆಗೆ ಆಗಮಿಸಿದ್ದ ಈ ಅವಳಿಗಳನ್ನು ಮತಗಟ್ಟೆಯ ಅಧಿಕಾರಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಇಬ್ಬರು ಪ್ರತ್ಯೇಕ ಮತದಾರರಾಗಿರುವ ಕಾರಣದಿಂದ ಮತದಾನದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು.
'ಇವರಿಬ್ಬರ ಮತದಾನ ಬಹಳ ವಿಶಿಷ್ಟವಾಗಿದೆ. ಸರಿಯಾದ ವಿಡಿಯೋಗ್ರಫಿ ಮಾಡಲು ಚುನಾವಣಾ ಆಯೋಗವು ನಮಗೆ ಹೇಳಿದೆ. ಅವರು ವಿಶೇಷಚೇತನ ಮತದಾರರಿಗೆ ಆದರ್ಶ. ಅವರಿಬ್ಬರಲ್ಲಿ ಮತದಾನದ ಗೌಪ್ಯತೆಯನ್ನು ಕಾಪಾಡಲು, ಒಬ್ಬರು ಮತದಾನ ಮಾಡುವಾಗ ಇನ್ನೊಬ್ಬರು ನೋಡದಂತೆ ಕನ್ನಡಕವನ್ನು ನೀಡಲಾಗಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.