ಶಾಜಾಪುರ (ಮಧ್ಯಪ್ರದೇಶ):ದೇಶದಲ್ಲಿ ಜಾತಿ ಗಣತಿ ಕುರಿತು ಪ್ರಬಲ ಧ್ವನಿ ಎತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿಂದುಳಿದ ವರ್ಗಗಳಿಗೆ ಸೇರಿದ ಶೇ.50ರಷ್ಟು ಜನರಿಗೆ ತಮ್ಮ ಹಕ್ಕುಗಳು ಮತ್ತು ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶಕ್ಕೆ ರಾಹುಲ್ ಗಾಂಧಿ ಶುಕ್ರವಾರ ಭೇಟಿ ನೀಡಿದ್ದಾರೆ. ಶಾಜಾಪುರ ಜಿಲ್ಲೆಯ ಕಲಾಪಿಪಾಲ್ ವಿಧಾನಸಭಾ ಕ್ಷೇತ್ರದ ಪೊಲೈಕಲನ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿ ವಿಷಯ ಪ್ರಸ್ತಾಪಿಸಿದರು. ಹಿಂದುಳಿದ ಸಮುದಾಯದ ಜನರಿಗೆ ತಮ್ಮ ಹಕ್ಕುಗಳು ಸಿಗುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕಾಂಗ್ರೆಸ್ ಸಂಸದ, ಕೇಂದ್ರದ ಬಿಜೆಪಿ ಸರ್ಕಾರವು ದಲಿತರು ಮತ್ತು ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರ ಏಳ್ಗೆಗಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ:ತೆಲಂಗಾಣದ ಹಿಂದುಳಿದ ವರ್ಗಗಳ ಮೇಲೆ ಕಾಂಗ್ರೆಸ್ ಕಣ್ಣು: ಶೀಘ್ರವೇ ಅಭಿಯಾನಕ್ಕೆ ಸಿದ್ದರಾಮಯ್ಯ ಚಾಲನೆ, ಗೆಹ್ಲೋಟ್, ಬಘೇಲ್ಗೂ ಆಹ್ವಾನ
ಪ್ರಧಾನಿ ಮೋದಿ ಜನರ ಹಕ್ಕುಗಳನ್ನು ನಾಶ ಮಾಡುತ್ತಿದ್ದಾರೆ. ದೇಶದಲ್ಲಿ ಒಬಿಸಿ ಜನಸಂಖ್ಯೆ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಷ್ಟು ಹಿಂದುಳಿದ ವರ್ಗದವರಿದ್ದಾರೆ ಎಂಬುದು ತಿಳಿದುಕೊಳ್ಳುವುದು ಮುಖ್ಯ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಒಬಿಸಿ ವರ್ಗಕ್ಕೆ ಸೇರಿದವರ ನಿಖರವಾದ ಸಂಖ್ಯೆಯನ್ನು ಕಂಡುಕೊಳ್ಳಲು ಎಕ್ಸ್-ರೇ ರೀತಿ ಕೆಲಸ ಮಾಡುತ್ತದೆ. ಆಧಾರದ ಮೇಲೆ ಸಮುದಾಯದ ಜನರಿಗೆ ಅವರ ಹಕ್ಕುಗಳು ಪಡೆಯಲು ಸಾಧ್ಯವಾಗಲಿದೆ ಎಂದು ರಾಹುಲ್ ಹೇಳಿದರು.
ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವು ಶೇ.27ರಷ್ಟು ಮೀಸಲಾತಿ ಒದಗಿಸಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಅದನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದರು. ಇದೇ ವೇಳೆ, ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರಿದ್ದಾರೆ. ಈ ಮೂವರು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಬಜೆಟ್‌ನಲ್ಲಿ ಏಕೆ ಪೂರ್ಣ ಭಾಗವಹಿಸುವಿಕೆಯನ್ನು ಹೊಂದಿಲ್ಲ?. ಒಬಿಸಿ ವರ್ಗಕ್ಕೆ ಸಹಭಾಗಿತ್ವ ನೀಡುವ ಬದಲು ಶೇ.5ರಷ್ಟು ಸರ್ಕಾರಿ ಅಧಿಕಾರಿಗಳು ಮಾತ್ರ ಬಜೆಟ್ ನಿರ್ಧರಿಸುತ್ತಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ರಾಹುಲ್ ಗಾಂಧಿ, ಮಹಿಳಾ ಮೀಸಲಾತಿ ಮಸೂದೆಯಲ್ಲಿ ಜನಗಣತಿ ಮತ್ತುಕ್ಷೇತ್ರ ಪುನರ್ ವಿಂಗಡಣೆಯ ಎರಡು ಷರತ್ತುಗಳನ್ನು ಇಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲು 10 ವರ್ಷಗಳು ಬೇಕಾಗುತ್ತದೆ. ಅಲ್ಲದೇ, ಮಹಿಳಾ ಮೀಸಲಾತಿಯಲ್ಲಿ ಒಬಿಸಿಗಳಿಗೆ ಏಕೆ ಮೀಸಲಾತಿ ಕಲ್ಪಿಸಿಲ್ಲ. ಒಂದು ಕಡೆ ಪ್ರಧಾನಿ ಮೋದಿ ಅವರು ಒಬಿಸಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ, ಒಬಿಸಿ ಮಹಿಳೆಯರಿಗೆ ಮೀಸಲಾತಿ ವಿಚಾರದಲ್ಲಿ ಇಡೀ ಬಿಜೆಪಿ ಮೌನವಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಹಿಂದೂ ಸಮಾಜ ಒಡೆಯಲು ಒಬಿಸಿ ವರ್ಗಗಳ ಮೇಲೆ ರಾಹುಲ್ ಗಾಂಧಿ 'ಧೃತರಾಷ್ಟ್ರ ಪ್ರೀತಿ': ಬಿಜೆಪಿ