ಕರ್ನಾಟಕ

karnataka

ETV Bharat / bharat

ಇಂದು ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ 'ಭಾರತ್ ಜೋಡೋ' ಯಾತ್ರೆಗೆ ಚಾಲನೆ

ಕಾಂಗ್ರೆಸ್​​ನ ಬಹುನಿರೀಕ್ಷಿತ 3,570 ಕಿ.ಮೀ ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಇದು ಭಾರತೀಯ ರಾಜಕೀಯಕ್ಕೆ ಪರಿವರ್ತನೆಯ ಕ್ಷಣ ಎಂದು ಕಾಂಗ್ರೆಸ್​​ ಹೇಳಿದೆ.

Bharat Jodo Yatra
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಚಾಲನೆ

By

Published : Sep 7, 2022, 8:28 AM IST

ಕನ್ಯಾಕುಮಾರಿ (ತಮಿಳುನಾಡು):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕನ್ಯಾಕುಮಾರಿಯಲ್ಲಿ 'ಭಾರತ್ ಜೋಡೋ ಯಾತ್ರೆ'ಗೆ ಚಾಲನೆ ನೀಡಲಿದ್ದಾರೆ. ಯಾತ್ರೆ ಪ್ರಾರಂಭಿಸುವ ಮೊದಲು ತಮಿಳುನಾಡಿನ ಪೆರಂಬದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕದಲ್ಲಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಅಲ್ಲಿಂದ ಕನ್ಯಾಕುಮಾರಿಗೆ ಆಗಮಿಸಿ ತಿರುವಳ್ಳುವರ್ ಸ್ಮಾರಕ, ವಿವೇಕಾನಂದ ಸ್ಮಾರಕ ಹಾಗೂ ಕಾಮರಾಜ್ ಸ್ಮಾರಕಕ್ಕೆ ಭೇಟಿ ನೀಡವರು. ಮಹಾತ್ಮಾ ಗಾಂಧಿ ಮಂಟಪದಲ್ಲಿ ಪ್ರಾರ್ಥನಾ ಸಭೆ ನಡೆಯಲಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಖಾದಿ ರಾಷ್ಟ್ರ ಧ್ವಜವನ್ನು ರಾಹುಲ್ ಗಾಂಧಿ ಹಸ್ತಾಂತರಿಸುವರು.

ಈ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುವಂತೆ ಪ್ರಿಯಾಂಕಾ ಗಾಂಧಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ, ನಿರುದ್ಯೋಗ ಮತ್ತಿತರ ಜನಸಾಮಾನ್ಯರ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

3,570 ಕಿ.ಮೀ ಯಾತ್ರೆ:12 ರಾಜ್ಯಗಳ ಮೂಲಕ ಹಾದುಹೋಗುವ ಮತ್ತು ಐದು ತಿಂಗಳಲ್ಲಿ (150 ದಿನಗಳು) ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ ಯಾತ್ರೆ ಸಾಗಲಿದೆ. ಇದರಲ್ಲಿ 118 ಮುಖಂಡರು ಭಾಗವಹಿಸಲಿದ್ದಾರೆ.

  • ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 11 ರಂದು ಕೇರಳಕ್ಕೆ ತಲುಪಲಿದೆ.
  • ನಂತರ 18 ದಿನಗಳ ಕಾಲ ಕೇರಳದಲ್ಲಿ ಸಾಗಿ ಸೆಪ್ಟೆಂಬರ್ 30 ರಂದು ಕರ್ನಾಟಕಕ್ಕೆ ಆಗಮಿಸಲಿದೆ.
  • ಕರ್ನಾಟಕದಲ್ಲಿ 21 ದಿನಗಳ ಕಾಲ ನಡೆಯಲಿದೆ. ನಂತರ ಇತರ ಉತ್ತರ ಭಾರತದ ರಾಜ್ಯಗಳತ್ತ ಸಾಗಲಿದೆ.
  • ಯಾತ್ರೆಯಲ್ಲಿ ಭಾಗವಹಿಸುವ ನಾಯಕರ ತಾತ್ಕಾಲಿಕ ಪಟ್ಟಿಯಲ್ಲಿ ಕಾಂಗ್ರೆಸ್ ಯುವ ನಾಯಕ ಕನ್ಹಯ್ಯಾ ಕುಮಾರ್, ಪವನ್ ಖೇರಾ ಮತ್ತು ಪಂಜಾಬ್ ಮಾಜಿ ಸಚಿವ ವಿಜಯ್ ಇಂದರ್ ಸಿಂಗ್ಲಾ ಸೇರಿದಂತೆ ಇತರರು ಸೇರಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗುವ ಯಾತ್ರೆ, ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕರಬಾದ್, ನಾಂದೇಡ್, ಇಂದೋರ್, ಕೊಟಾ, ಅಳ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್ ಮೂಲಕ ಸಾಗಿ ಜಮ್ಮು ಮತ್ತು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ. ರಾಷ್ಟ್ರಧ್ವಜದೊಂದಿಗೆ ಮೆರವಣಿಗೆಯ ಹಿಂದಿನ ಉದ್ದೇಶವೆಂದರೆ ಇತರ ಸಮಾನ ಮನಸ್ಕ ಪಕ್ಷಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಕಾರ್ಯಕ್ರಮಕ್ಕೆ ಸೇರಬೇಕೆಂದು ಪಕ್ಷವು ಬಯಸುತ್ತದೆ. ದ್ವೇಷವನ್ನು ಹೋಗಲಾಡಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ನಿರ್ಣಾಯಕ ಕ್ಷಣ: ಯಾತ್ರೆಯು ಭಾರತೀಯ ರಾಜಕೀಯಕ್ಕೆ ಪರಿವರ್ತನೆಯ ಕ್ಷಣವಾಗಿದೆ ಮತ್ತು ಪಕ್ಷದ ಪುನರುಜ್ಜೀವನಕ್ಕೆ ಇದು ನಿರ್ಣಾಯಕ ಕ್ಷಣವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಇದು ಘೋಷಣೆ, ಭಾಷಣಗಳನ್ನು ಮಾಡುವ ಯಾತ್ರೆಯಾಗುವುದಿಲ್ಲ. ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಜನರ ಸಮಸ್ಯೆಗಳತ್ತ ಗಮನ ಹರಿಸುವ ಗುರಿಯನ್ನು ಹೊಂದಿದೆ. ರಾಹುಲ್ ಗಾಂಧಿ ಅವರು 118 ನಾಯಕರೊಂದಿಗೆ ವಿವಿಧ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಭಾರತ್ ಜೋಡೋ ಯಾತ್ರೆಯ ಸಂಪೂರ್ಣ ವಿವರ ಹೀಗಿದೆ..

  • ಯಾತ್ರೆಯು 150 ದಿನಗಳಲ್ಲಿ 3,570 ಕಿಮೀ ಕ್ರಮಿಸಲಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
  • ಯಾತ್ರಿಗಳು ಯಾವುದೇ ಹೋಟೆಲ್‌ನಲ್ಲಿ ಉಳಿಯುವುದಿಲ್ಲ. ಬದಲಾಗಿ ಕಂಟೈನರ್‌ಗಳಲ್ಲಿ ಉಳಿಯುತ್ತಾರೆ. ಒಟ್ಟು 60 ಕಂಟೈನರ್ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಂಟೈನರ್‌ಗಳಲ್ಲಿ ಮಲಗುವ ಹಾಸಿಗೆಗಳು, ಶೌಚಾಲಯಗಳು ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ.
  • ಭದ್ರತಾ ಕಾರಣಗಳಿಂದಾಗಿ, ರಾಹುಲ್ ಗಾಂಧಿ ಒಂದು ಕಂಟೈನರ್‌ನಲ್ಲಿ ಉಳಿದುಕೊಳ್ಳುತ್ತಾರೆ.
  • ಕಂಟೈನರ್‌ಗಳನ್ನು ಪ್ರತಿದಿನ ಹೊಸ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಪೂರ್ಣ ಸಮಯದ ಯಾತ್ರಿಗಳು ರಸ್ತೆಯ ಮೇಲೆ ತಿನ್ನುತ್ತಾರೆ. ಅವರಿಗೆ ಲಾಂಡ್ರಿ ಸೇವೆಗಳನ್ನು ಒದಗಿಸಲಾಗುವುದು.
  • ಭಾರತ್ ಜೋಡೋ ಯಾತ್ರೆಯ ಈ 5 ತಿಂಗಳುಗಳಲ್ಲಿ ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ.
  • ಯಾತ್ರಿಗಳು ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ನಡೆಯುತ್ತಾರೆ.
  • ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚ್‌ಗಳಲ್ಲಿ ಯಾತ್ರೆ ಸಾಗುತ್ತದೆ. ಬೆಳಗಿನ ಬ್ಯಾಚ್ 7 ರಿಂದ 10.30 ರವರೆಗೆ ಮತ್ತು ಸಂಜೆ ಬ್ಯಾಚ್ 3.30 ರಿಂದ 6.30 ರವರೆಗೆ ನಡೆಯಲಿವೆ. ಪ್ರತಿನಿತ್ಯ 22ರಿಂದ 23 ಕಿ.ಮೀ ನಡೆಯಲು ಯೋಜಿಸಲಾಗಿದೆ. ಯಾತ್ರೆಯಲ್ಲಿ ಶೇ. 30ರಷ್ಟು ಮಹಿಳೆಯರಿದ್ದಾರೆ. ಸುಮಾರು 50,000 ಜನರು ಯಾತ್ರೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.
  • ಭಾರತ್ ಜೋಡೋ ಯಾತ್ರೆಯ ಅತ್ಯಂತ ಹಿರಿಯ ಸದಸ್ಯ ವಿಜೇಂದ್ರ ಸಿಂಗ್ ಮಹ್ಲಾವತ್(58) ರಾಜಸ್ಥಾನದ ಕಾಂಗ್ರೆಸ್ ನಾಯಕ. ಕಿರಿಯ ಸದಸ್ಯರು ಅಜಂ ಜೊಂಬ್ಲಾ ಮತ್ತು ಬೆಮ್ ಬಾಯಿ-ಇಬ್ಬರೂ ಅರುಣಾಚಲ ಪ್ರದೇಶದವರು. ಕನ್ಹಯ್ಯಾ ಕುಮಾರ್, ಪವನ್ ಖೇರಾ ಕೂಡ ಯಾತ್ರೆ ತಂಡದ ಭಾಗವಾಗಿದ್ದಾರೆ.
  • ಮಾರ್ಗ ನಕ್ಷೆಯ ಪ್ರಕಾರ, ಭಾರತ್ ಜೋಡೋ ಯಾತ್ರೆ ಈ 20 ಪ್ರಮುಖ ಸ್ಥಳಗಳನ್ನು ತಲುಪುತ್ತದೆ. ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಲಗಾಂವ್ ಜಮೋದ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು, ಶ್ರೀನಗರ.
  • ಯಾತ್ರೆಯು ಕೇರಳದಲ್ಲಿ 18 ದಿನ ಹಾಗೂ ಕರ್ನಾಟಕದಲ್ಲಿ 21 ದಿನಗಳ ಕಾಲ ನಡೆಯಲಿದೆ.

ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ: ಕರ್ನಾಟಕದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದೆ. ಚಾಮರಾಜನಗರದಿಂದ ಶುರುವಾಗಿ ಗುಂಡ್ಲುಪೇಟೆ, ಮಂಡ್ಯ, ಮೈಸೂರು, ಬಳ್ಳಾರಿ, ಚಿತ್ರದುರ್ಗ, ರಾಯಚೂರು ಭಾಗದಲ್ಲಿ ಪಾದಯಾತ್ರೆ ಹೋಗಿ ಅಲ್ಲಿಂದ ತೆಲಂಗಾಣಕ್ಕೆ ಹೋಗಲಿದೆ. ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಾಗುತ್ತದೆ.

ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ ನಂತರ ಇಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರುಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರ ಪ್ರವೇಶವನ್ನು ಪಾದಯಾತ್ರೆ ಪ್ರವೇಶಿಸಲಿದೆ.

ಇದನ್ನೂ ಓದಿ:ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ: ರಾಜ್ಯದಲ್ಲಿ 21 ದಿನ ಓಡಾಟಕ್ಕೆ ಕಾರ್ಯತಂತ್ರ

ABOUT THE AUTHOR

...view details