ನವದೆಹಲಿ: ಜೂನ್ 24 ರಂದು ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. 2019 ರ ಆಗಸ್ಟ್ 5 ರಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ನಂತರ ಮೊದಲ ಪ್ರಧಾನಿ ಸರ್ವಪಕ್ಷ ಸಭೆ ಕರೆದಿದ್ದಾರೆ.
ಪಕ್ಷದ ನಾಯಕಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಕರಣ್ ಸಿಂಗ್, ಗುಲಾಮ್ ನಬಿ ಆಜಾದ್, ಪಿ. ಚಿದಂಬರಂ ಮತ್ತು ಗುಲಾಮ್ ಅಹ್ಮದ್ ಮೀರ್ ಉಪಸ್ಥಿತರಿದ್ದರು.
ಜೂನ್ 24 ರಂದು ನಡೆಯಲಿರುವ ಸಭೆಯಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್, ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಮತ್ತು ರಾಜ್ಯ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗುಲಾಮ್ ಅಹ್ಮದ್ ಮೀರ್ ಭಾಗವಹಿಸಲಿದ್ದಾರೆ.
ಸಭೆಗೆ ಒಂದು ಕಾರ್ಯಸೂಚಿ ಇರಬೇಕು ಎಂದು ನಾವು ಭಯಸುತ್ತೇವೆ. ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಕಾರ್ಯಸೂಚಿಗಳನ್ನು ಉಲ್ಲೇಖಿಸಿಲ್ಲ. ಆದ್ದರಿಂದ ಇದು ಸರಿಯಾದ ಕ್ರಮವಲ್ಲ ಎಂದು ಪಕ್ಷದ ನಾಯಕ ಸಭೆ ಬಳಿಕ ಕಾಂಗ್ರೆಸ್ ಮುಖಂಡ ಗುಲಾಮ್ ಅಹ್ಮದ್ ಮೀರ್ ಹೇಳಿದ್ದಾರೆ.
2019 ರ ಆಗಸ್ಟ್ 6 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಮ್ಮು ಕಾಶ್ಮೀರದ ಪೂರ್ಣ ರಾಜ್ಯತ್ವವನ್ನು ಪುನಃ ಸ್ಥಾಪಿಸುವ ಬೇಡಿಕೆಗೆ ಪಕ್ಷ ಬದ್ದವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಕಳೆದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ "ಆಗಸ್ಟ್ 6, 2019 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಜಮ್ಮು ಕಾಶ್ಮೀರದ ಪೂರ್ಣ ರಾಜ್ಯತ್ವವನ್ನು ಪುನಃ ಸ್ಥಾಪಿಸಲು ಒತ್ತಾಯಿಸಿದೆ. ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದುಗೊಳಿಸುವುದು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ತತ್ವಗಳ ಮೇಲಿನ ನೇರ ದಾಳಿ ಎಂದಿದ್ದಾರೆ.
ಜಮ್ಮುಕಾಶ್ಮೀರಕ್ಕೆ ರಾಜ್ಯತ್ವ ನೀಡುವುದರಿಂದ ಅಲ್ಲಿನ ಜನರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ದೆಹಲಿಯಿಂದ ಆಡಳಿತ ನಡೆಸುವ ಬದಲು, ಅಲ್ಲಿನ ಜನರಿಗೆ ಬೇಕಾದ ತೀರ್ಮಾನ ತೆಗೆದುಕೊಳ್ಳಲು ವಿಧಾನಸಭೆ ಇರುತ್ತದೆ. ಜಮ್ಮು ಕಾಶ್ಮೀರದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಇದು ಒಂದೇ ದಾರಿ ಇರುವುದು ಎಂದು ಸುರ್ಜೇವಾಲ ಹೇಳಿದ್ದಾರೆ.