ನವದೆಹಲಿ:ಪಂಚರಾಜ್ಯಗಳ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದೆ. ಚುನಾವಣಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳನ್ನು ಕೆಲವು ಪಕ್ಷಗಳು ಬಿಡುಗಡೆ ಮಾಡಿವೆ.
ಉತ್ತರಾಖಂಡದಲ್ಲಿಯೂ ಚುನಾವಣಾ ಕಣ ರಂಗೇರಿದೆ. ಮಾಜಿ ಸಚಿವ ಹರಕ್ ಸಿಂಗ್ ರಾವತ್ ಬಿಜೆಪಿಯಿಂದ ಹೊರನಡೆದು, ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮಾತುಕತೆಗಳೂ ತೀವ್ರಗೊಂಡಿವೆ ಎನ್ನಲಾಗುತ್ತಿದೆ. ಈವರೆಗೆ ಹರಕ್ಸಿಂಗ್ ರಾವತ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬೆನ್ನಲ್ಲೆ ಉತ್ತರಾಖಂಡ್ನ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ ನಡೆಸಿದ್ದು, ಅಭ್ಯರ್ಥಿಗಳ ಹೆಸರುಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡ್ನ ಎಲ್ಲ 70 ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜನವರಿ 19ರಂದು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಣೇಶ್ ಗೋಡಿಯಾಲ್ ಪ್ರತಿಕ್ರಿಯೆ ನೀಡಿ, ಸ್ಕ್ರೀನಿಂಗ್ ಸಮಿತಿಯು ತನ್ನ ಕೆಲಸವನ್ನು ಮಾಡಿದೆ. ಕೇಂದ್ರ ಚುನಾವಣಾ ಸಮಿತಿಗೆ ಹೆಸರುಗಳನ್ನು ಕಳುಹಿಸಲಾಗಿದೆ. ಹರಕ್ ಸಿಂಗ್ ರಾವತ್ ವಿಚಾರದಲ್ಲಿ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಸಾಮೂಹಿಕವಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಪ್ಪುಗಳನ್ನು ಒಪ್ಪಿಕೊಂಡರೆ ಬರಬಹುದು:ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾವು ಎಲ್ಲವನ್ನೂ ವಿವರವಾಗಿ ಚರ್ಚಿಸುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲಲು ನಾವು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಹರಕ್ ಸಿಂಗ್ ರಾವತ್ ಕುರಿತು ಮಾತನಾಡಿರುವ ಹರೀಶ್ ರಾವತ್ ರಾಜಕೀಯದಲ್ಲಿ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿವೆ. ಅವರು ಪಕ್ಷ ಸೇರುವ ಬಗ್ಗೆ ನನಗೆ ತಿಳಿದಿಲ್ಲ. ಈ ವಿಚಾರವನ್ನು ನನ್ನೊಂದಿಗೆ ಚರ್ಚಿಸಿಲ್ಲ. ಅವರು ತಪ್ಪುಗಳನ್ನು ಒಪ್ಪಿಕೊಂಡರೆ, ಪಕ್ಷಕ್ಕೆ ಬರಬಹುದು. ಈ ವಿಷಯ ನನಗೆ ಸಂಬಂಧಿಸಿಲ್ಲ. ಪಕ್ಷ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ದೇವೇಂದ್ರ ಯಾದವ್ ಅವರಿಗೆ ಕೊರೊನಾ ಸೋಂಕು ಇದ್ದ ಕಾರಣದಿಂದ ಸಭೆಗೆ ಹಾಜರಾಗಿರಲಿಲ್ಲ. ಇದೇ ಕಾರಣದಿಂದ ಸ್ಕ್ರೀನಿಂಗ್ ಸಭೆಯಲ್ಲಿ ಹರಕ್ ಸಿಂಗ್ ರಾವತ್ ಬಗ್ಗೆ ಚರ್ಚೆ ನಡೆದರೂ, ತೀರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ.