ಕರ್ನಾಟಕ

karnataka

ETV Bharat / bharat

ಸೀಟು ಹಂಚಿಕೆ, ಚುನಾವಣೆ ಸಿದ್ಧತೆ ಚರ್ಚೆಗೆ ಡಿಸೆಂಬರ್​ ಅಂತ್ಯದಲ್ಲಿ ಕಾಂಗ್ರೆಸ್​ ಉಸ್ತುವಾರಿಗಳ ಸಭೆ

ಸೀಟು ಹಂಚಿಕೆ ಮತ್ತು 2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಡಿಸೆಂಬರ್ 30, 31ರಂದು ಕಾಂಗ್ರೆಸ್ ಎಲ್ಲಾ ರಾಜ್ಯಗಳ ಮುಖ್ಯಸ್ಥರ ಸಭೆ ಕರೆದಿದೆ.

ಕಾಂಗ್ರೆಸ್​ ಉಸ್ತುವಾರಿಗಳ ಸಭೆ
ಕಾಂಗ್ರೆಸ್​ ಉಸ್ತುವಾರಿಗಳ ಸಭೆ

By ETV Bharat Karnataka Team

Published : Dec 25, 2023, 7:31 PM IST

ನವದೆಹಲಿ:ವಿಪಕ್ಷಗಳ ಇಂಡಿಯಾ ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್​ ಮುಂದಿನ ಲೋಕಸಭೆ ಚುನಾವಣೆಯ ಅಗತ್ಯ ಸಿದ್ಧತೆ ಮತ್ತು ಸೀಟು ಹಂಚಿಕೆ ಬಗ್ಗೆ ಚರ್ಚಿಸಲು ರಾಜ್ಯಗಳ ಉಸ್ತುವಾರಿಗಳ ಸಭೆ ಕರೆದಿದೆ. ಇದೇ ಡಿಸೆಂಬರ್​ 30, 31ರಂದು ದಿಲ್ಲಿಯಲ್ಲಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್, ಮುಕುಲ್ ವಾಸ್ನಿಕ್ ಮತ್ತು ಮೋಹನ್ ಪ್ರಕಾಶ್ ಅವರಿರುವ ಐದು ಸದಸ್ಯರ ಕಾಂಗ್ರೆಸ್ ಸಮಿತಿಯು ಆಯಾ ರಾಜ್ಯಗಳ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಮತ್ತು ಸಿಎಲ್‌ಪಿ ನಾಯಕರೊಂದಿಗೆ 2 ದಿನ ಸಂವಾದ ನಡೆಸಲಿದೆ. ಇಂಡಿಯಾ ಕೂಟದ ಮಿತ್ರ ಪಕ್ಷಗಳ ಜೊತೆ ಸೀಟು ಹಂಚಿಕೆಗೆ ಒಪ್ಪುವ ಮೊದಲು ಪಕ್ಷದ ನಾಯಕರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಭೆಯಲ್ಲಿ ಪಡೆದುಕೊಳ್ಳಲಾಗುತ್ತದೆ.

ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ (80), ಬಿಹಾರ (40), ಮಹಾರಾಷ್ಟ್ರ (48), ಜಾರ್ಖಂಡ್ (14), ಪಂಜಾಬ್ (13), ದೆಹಲಿ (7), ಗುಜರಾತ್ (26), ಅಸ್ಸಾಂ (14), ಜಮ್ಮು ಮತ್ತು ಕಾಶ್ಮೀರ (6), ತಮಿಳುನಾಡು (39) ಮತ್ತು ಪಶ್ಚಿಮ ಬಂಗಾಳದಲ್ಲಿ (42) ಪಕ್ಷವು ಹಿಡಿತ ಹೊಂದಿರುವ ಕ್ಷೇತ್ರಗಳ ಬಗ್ಗೆ ಮಾಹಿತಿ ಹಂಚಿಕೆಯಾಗಲಿದೆ. ಸಮಿತಿಯು ಸೀಟು ಹಂಚಿಕೆಯ ಬಗ್ಗೆ ಬ್ಲೂಪ್ರಿಂಟ್ ಸಿದ್ಧಪಡಿಸಲಿದೆ. ನಂತರ ಅದನ್ನು ಇಂಡಿಯಾ ಕೂಟದ ಪಕ್ಷಗಳ ಜೊತೆ ಚರ್ಚಿಸಲಿದೆ.

ಉಸ್ತುವಾರಿಗಳಿಗೆ ಟಾಸ್ಕ್​:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಈಚೆಗೆ ಹಲವು ರಾಜ್ಯಗಳ ಉಸ್ತುವಾರಿಗಳನ್ನು ಬದಲಿಸಿ ನೇಮಿಸಿದ್ದರು. ಡಿಸೆಂಬರ್​ 21 ರಂದು ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಬಿಜೆಪಿ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿ ರಾಜ್ಯಗಳಲ್ಲಿ ಹೇಗೆಲ್ಲಾ ತಂತ್ರ ರೂಪಿಸಬೇಕು ಎಂಬ ಬಗ್ಗೆಯೂ ನೀಲನಕ್ಷೆ ರೂಪಿಸಿಕೊಂಡು ಬರಲು ಉಸ್ತುವಾರಿಗಳಿಗೆ ಸೂಚಿಸಲಾಗಿದೆ.

ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಬದ್ಧವಾಗಿದೆ. ಮಿತ್ರಪಕ್ಷಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಸೀಟು ಹಂಚಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಈಗ ಅದು ಯೋಜಿತ ರೀತಿಯಲ್ಲಿ ನಡೆಯಲಿದೆ. ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಸುಗಮವಾಗಿ ನಡೆಯಲಿದೆ ಎಂದು ಉತ್ತರ ಪ್ರದೇಶದ ಎಐಸಿಸಿ ಉಸ್ತುವಾರಿ ಅವಿನಾಶ್ ಪಾಂಡೆ ಈಟಿವಿ ಭಾರತ್‌ಗೆ ತಿಳಿಸಿದರು.

ಎಸ್‌ಪಿ ಮತ್ತು ಆರ್‌ಎಲ್‌ಡಿ ಈಗಾಗಲೇ ಕೂಟದಲ್ಲಿವೆ. ಬಿಎಸ್‌ಪಿ ಕೂಡ ಮೈತ್ರಿಕೂಟಕ್ಕೆ ಸೇರಲಿದೆ ಎಂದು ಹೇಳಿದ ಅವರು, ಬಿಜೆಪಿಯ ವಿರುದ್ಧ ಹೋರಾಡಲು ಉತ್ತರಪ್ರದೇಶದಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡಲಿವೆ. 2024 ರ ಹೋರಾಟವು ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ನಡೆಯಲಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಸಾರ್ವಜನಿಕ ಸಮಸ್ಯೆಗಳ ಮೇಲೆ ಪ್ರತಿಪಕ್ಷಗಳು ಹೆಚ್ಚು ಗಮನ ಕೇಂದ್ರೀಕರಿಸಲಿದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ, ಅವರದು ಬಸ್‌ ಸ್ಟ್ಯಾಂಡ್: ಪ್ರಹ್ಲಾದ್ ಜೋಶಿ ವ್ಯಂಗ್ಯ

ABOUT THE AUTHOR

...view details