ನವದೆಹಲಿ: ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ನೇತೃತ್ವದ ಕಾಂಗ್ರೆಸ್ ನಿಯೋಗವು ಇಂದು ಬೆಳಗ್ಗೆ ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ, ತನ್ನ ಪಕ್ಷದ ಸಂಸದರ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯ ಸಮಯದಲ್ಲಿ ಪಕ್ಷದ ಸಂಸದರು ಹಾಗೂ ಕಾರ್ಯಕರ್ತರನ್ನು ಎಳೆದಾಡಿ ದೆಹಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬುಧವಾರದಂದು ಪೊಲೀಸರು ಕಾಂಗ್ರೆಸ್ ಕಚೇರಿಗೆ ನುಗ್ಗಿ ಸಂಸದರು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪಕ್ಷದ ಮುಖಂಡರು ಮುಕ್ತವಾಗಿ ಸಂಚರಿಸದಂತೆ ಕಾಂಗ್ರೆಸ್ ಕಚೇರಿಯ ಹೊರಗೆ ಬ್ಯಾರಿಕೇಡ್ಗಳನ್ನು ಹಾಕಿ ನಿರ್ಬಂಧಿಸಲಾಯಿತು ಎಂದು ಕಾಂಗ್ರೆಸ್ ಮುಖಂಡರು ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
ಸ್ಪೀಕರ್ ಅವರ ಭೇಟಿಯ ನಂತರ ಮಾತನಾಡಿದ ಮುಖಂಡ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಅವರು ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ದೆಹಲಿ ಪೊಲೀಸರು ಪಕ್ಷದ ಕಚೇರಿಗೆ ನುಗ್ಗಿ ಸಂಸದರು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದನ್ನು ನಾವು ಅವರಿಗೆ ವಿವರಿಸಿದೆವು. ಎಂದು ಹೇಳಿದರು.