ನವದೆಹಲಿ : ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆಪ್ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿರುವ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆಪ್ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಅವರು, ಪ್ರತಿಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ಕಾಂಗ್ರೆಸ್ ಮೂರನೇ ಬಾರಿಗೆ ರಾಹುಲ್ ಅವರನ್ನು ಪಕ್ಷದ ನಾಯಕರನ್ನಾಗಿ ಮಾಡುವುದನ್ನು ತಡೆಯಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. 2024ರ ಲೋಕಸಭೆ ಚುನಾವಣೆಯನ್ನೂ ರಾಹುಲ್ ಗಾಂಧಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದೆ.
ಆಪ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಕೇಜ್ರಿವಾಲ್ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಆಪ್ ಮುಖ್ಯ ವಕ್ತಾರೆ ಇಂದು ಹೇಳಿರುವುದು ನಮಗೆ ಹೊಸದೇನಲ್ಲ. ಕೇಜ್ರಿವಾಲ್ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ತಮ್ಮ ಸಹೋದ್ಯೋಗಿಗಳಂತೆ ಜೈಲಿಗೆ ಹೋಗಲು ಅವರು ಬಯಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ಪ್ರತಿಪಕ್ಷಗಳ ಒಗ್ಗಟ್ಟನ್ನು ಕೆಡಿಸಲು ಅವರು ಸಿದ್ಧರಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಬೆಂಬಲ ಬೇಕಿದ್ದರೆ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಕೇಜ್ರಿವಾಲ್ ಅವರ ಹೇಳಿಕೆಗಳು ಗೊಂದಲಮಯವಾಗಿವೆ. ಅವರ ಹೇಳಿಕೆಗಳು ಬಿಜೆಪಿಗೆ ಒಲವು ತೋರುವ ಲೆಕ್ಕಾಚಾರದ ನಡೆಯಾಗಿದೆ ದೆಹಲಿ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅಜಯ್ ಮಾಕೆನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿಚಾರವಾಗಿ ಪ್ರಾದೇಶಿಕ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಪಡೆಯಲು ಆಪ್ ಉತ್ಸುಕವಾಗಿದ್ದು, ಇದೇ ವೇದಿಕೆಯಲ್ಲಿ ಬಿಜೆಪಿ ವಿರೋಧಿ ನಿಲುವನ್ನು ನಿರ್ಮಿಸಲು ಕಾಂಗ್ರೆಸ್ ಮುಂದಾಗಿದೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯ ಮೊದಲು, ಕೇಜ್ರಿವಾಲ್ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್‌ನಿಂದ ಬೆಂಬಲವನ್ನು ಪಡೆಯಲು ಯತ್ನಿಸಿದ್ದರು. ಅಲ್ಲದೆ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೊಪ್ಪು ಹಾಕಿಲ್ಲ ಎಂದು ಹೇಳಲಾಗಿದೆ. ಸುಗ್ರೀವಾಜ್ಞೆ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳ ಸಭೆ ಸರಿಯಾದ ವೇದಿಕೆಯಲ್ಲ. ಮುಂಗಾರು ಅಧಿವೇಶನ ಪ್ರಾರಂಭವಾಗುವಾಗ ಈ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ತಿಳಿಸುತ್ತದೆ ಎಂದು ಖರ್ಗೆ ಕೇಜ್ರಿವಾಲ್ ಅವರಿಗೆ ಹೇಳಿದ್ದಾಗಿ ತಿಳಿದುಬಂದಿದೆ. ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕೇಜ್ರಿವಾಲ್ ಅವರಿಗೆ ಸುಗ್ರೀವಾಜ್ಞೆ ಪ್ರತಿಪಕ್ಷಗಳ ಸಭೆಯ ಕಾರ್ಯಸೂಚಿಯಲ್ಲಿಲ್ಲ ಎಂದು ಹೇಳಿದ್ದರು.
ಪ್ರತಿಪಕ್ಷಗಳ ಸಭೆಯಲ್ಲಿ ಆಪ್ ನಾಯಕರೊಬ್ಬರು, ಕಾಂಗ್ರೆಸ್ ಪಕ್ಷವು ಪಂಜಾಬ್ ಮತ್ತು ದೆಹಲಿಯನ್ನು ತೊರೆಯಬೇಕು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಒತ್ತಾಯಿಸಿದ್ದರು. ಇದಕ್ಕೆ ಈ ರೀತಿಯ ಒಳ ಒಪ್ಪಂದವು ಕಾಂಗ್ರೆಸ್ನಲ್ಲಿ ಇಲ್ಲವೆಂದು ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಪ್ರತಿಸ್ಪರ್ಧಿಗಳಾಗಿರುವ ಕಾಂಗ್ರೆಸ್ ಮತ್ತು ಆಪ್, 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಒಟ್ಟಾಗಿ ತೊಡೆ ತಟ್ಟಲು ಮುಂದಾಗಿದೆ.
ಇದನ್ನೂ ಓದಿ :Delhi Ordinance Row: ದೆಹಲಿಯಂತೆ ಇತರ ರಾಜ್ಯಗಳ ಮೇಲೂ ಸುಗ್ರೀವಾಜ್ಞೆ ದಾಳಿ ನಡೆಯಲಿದೆ: ಕೇಜ್ರಿವಾಲ್