ನವದೆಹಲಿ : ಜನವರಿ 22ರ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಡಿದ ಆಹ್ವಾನವನ್ನು ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್ ತಿರಸ್ಕರಿಸಿದೆ. ಅಲ್ಲದೇ, ಈ ದೇವಾಲಯ ಉದ್ಘಾಟನೆ ಸಮಾರಂಭವನ್ನು ''ಬಿಜೆಪಿ - ಆರ್ಎಸ್ಎಸ್ನ ರಾಜಕೀಯ ಕಾರ್ಯಕ್ರಮ" ಎಂದು ಅದು ಟೀಕಿಸಿದೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ಅಧಿಕೃತ ಹೇಳಿಕೆಯೊಂದನ್ನ ಪೋಸ್ಟ್ ಮಾಡಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ನಾಯಕರು ಅಧಿಕೃತವಾಗಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದೆ.
ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ, ಶ್ರೀಮತಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಅಧೀರ್ ರಂಜನ್ ಚೌಧರಿ ಅವರಿಗೆ ರಾಮಮಂದಿರ ಟ್ರಸ್ಟ್ ಅಧಿಕೃತವಾದ ಆಹ್ವಾನವನ್ನು ನೀಡಿತ್ತು. ಈ ಆಹ್ವಾನವನ್ನು ಕಾಂಗ್ರೆಸ್ ನಾಯಕರು ಸ್ವೀಕಾರ ಕೂಡಾ ಮಾಡಿದ್ದರು. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ, RSS/BJP ಬಹಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣ ವಿಚಾರವನ್ನು ರಾಜಕೀಯ ವಿಷಯವಾಗಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು, ಇನ್ನು ಸಂಪೂರ್ಣವಾಗಿ ಕಟ್ಟಡ ಕಾಮಗಾರಿ ಮುಗಿಯದೇ, ಚುನಾವಣಾ ಲಾಭಕ್ಕಾಗಿ ತ್ವರಿತವಾಗಿ ಪ್ರಾಣ ಪ್ರತಿಷ್ಠಾಪನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದೆ.